ಬೆಂಗಳೂರು: ಪ್ರೇಮಲೋಕದ ಸರದಾರ, ಅಭಿಮಾನಿಗಳ ಅಚ್ಚುಮೆಚ್ಚಿನ ರಣಧೀರ, ಕನ್ನಡ ಚಿತ್ರರಂಗದ ಶೋ ಮ್ಯಾನ್ ಅಂತಾನೆ ಪ್ರಖ್ಯಾತಿ ಹೊಂದಿರುವ ನಟ ಡಾ. ವಿ. ರವಿಚಂದ್ರನ್. ನಟನಾಗಿ, ನಿರ್ದೇಶಕನಾಗಿ, ಸಂಗೀತಗಾರನಾಗಿ, ಸಾಹಿತಿಯಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬ್ರಾಂಡ್ ಕ್ರಿಯೇಟ್ ಮಾಡಿರೋ ರವಿಚಂದ್ರನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಕಳೆದ ನಾಲ್ಕೈದು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದ, ಸ್ಯಾಂಡಲ್ವುಡ್ನ ರವಿಮಾಮ ಈ ವರ್ಷ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಇಂದು, ತಮ್ಮ ಫ್ಯಾಮಿಲಿ ಹಾಗು ನಟಿ ಶೃತಿ, ನಟ ಶರಣ್ ಹಾಗು ಸಿನಿಮಾ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾಜಾಜಿ ನಗರದಲ್ಲಿರುವ ನಿವಾಸದಲ್ಲಿ ಅಭಿಮಾನಿಗಳು ಹಾಗೂ ಮಕ್ಕಳಾದ ಮನುರಂಜನ್ ರವಿಚಂದ್ರನ್ ಹಾಗು ವಿಕ್ರಮ್ ರವಿಚಂದ್ರನ್ ತಂದಿದ್ದ ಕೇಕ್ಗಳನ್ನು ಕತ್ತರಿಸಿ 61ನೇ ವರ್ಷದ ಬರ್ತ್ಡೇಯನ್ನು ಸೆಲೆಬ್ರೆಟ್ ಮಾಡಿದ್ದಾರೆ.
ಕೇಕ್ ಕಟ್ ಮಾಡಿದ ನಂತರ ಮಾತನಾಡಿದ ರವಿಚಂದ್ರನ್, ಹುಟ್ಟುಹಬ್ಬ ನಾವು ಬದುಕುವ ಅವಧಿಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಆದರೆ, ಅನುಭವಗಳನ್ನು ಹೆಚ್ಚು ಮಾಡುತ್ತದೆ. ಬರ್ತಡೇ ಆಚರಿಸಿಕೊಳ್ಳುವ ತಾಳ್ಮೆ ಇಲ್ಲ. ನಾನು ಹುಟ್ಟುಹಬ್ಬ ಆಚರಿಸಿಕೊಳ್ಳೋದು ಜನರ ಪ್ರೀತಿಗಾಗಿ ಮಾತ್ರ. ಇಲ್ಲಿಯವರೆಗೆ ನಾನು ಸೋತು, ಗೆದ್ದಿದ್ದೇನೆ. 61ನೇ ವಯಸ್ಸಿನಲ್ಲಿ ಮತ್ತೆ ಹೊಸ ಲೈಫ್ ಶುರುವಾಗಿದೆ. ಅದಕ್ಕೆಲ್ಲ ನೀವು ಪ್ರೀತಿ ಕೊಡಬೇಕು. ನನ್ನ ಜೀವನದಲ್ಲಿ ಸೋಲು- ಗೆಲುವನ್ನು ಎಂಜಾಯ್ ಮಾಡಿದ್ದೇನೆ. ನಾನು ಸಕ್ಸಸ್ನ್ನು ತಲೆಗೆ ಏರಿಸಿಕೊಂಡಿಲ್ಲ. ಆದರೆ ನನ್ನ ಹೆಗಲ ಮೇಲೆ ನಾನು ಸೋತಿರುವ ಸಿನಿಮಾಗಳಿವೆ. ಅವುಗಳು ನನ್ನ ಅನುಭವವನ್ನು ಹೆಚ್ಚಿಸುತ್ತವೆ. ಯಾಕೆಂದರೆ ನಾನು ಶಾಲೆಯಲ್ಲಿ ಓದಿಲ್ಲ. ಅದಕ್ಕೆ ಸಿನಿಮಾಗಳಿಂದ ಸಾಕಷ್ಟು ಪಾಠ ಕಲಿತಿದ್ದೇನೆ ಎಂದರು.
ನಮ್ಮ ಮನೆಯಲ್ಲಿ ಎಲ್ಲಿ ನೋಡಿದರು ಶಿವನ ವಿಗ್ರಹ ಕಾಣುತ್ತೆ. ಯಾಕೆಂದರೆ ನಾನು ಅತೀ ಹೆಚ್ಚು ಪ್ರೀತಿಸುವ ದೇವರು ಅಂದ್ರೆ ಶಿವ. ಒಂದು ದಿನ 15 ಸಾವಿರ ಕೊಟ್ಟು ಶಿವನ ವಿಗ್ರಹ ತಂದೆ. ಅಲ್ಲಿಂದ ಇಲ್ಲಿವರೆಗೂ ಅವರು ನನ್ನ ಕೈ ಬಿಟ್ಟಿಲ್ಲ. ಅದಕ್ಕೆ ಅವನು ನನಗೆ ಪರೀಕ್ಷೆ ಕೊಡ್ತಾನೆ ಇರ್ತಾನೆ. ನಾನು ಕೂಡ ಖುಷಿಯಿಂದ ಪರೀಕ್ಷೆಯನ್ನು ಎದುರಿಸ್ತಾ ಇರ್ತೇನೆ. ಜೀವನದಲ್ಲಿ ಸೋಲು, ಗೆಲುವು ನೋಡಿರುವ ವ್ಯಕ್ತಿಗೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾನೇ ಬೆಸ್ಟ್ ಉದಾಹರಣೆ ಎಂದು ಕ್ರೇಜಿಸ್ಟಾರ್ ತಮ್ಮ ಅನುಭವದ ಮಾತುಗಳನ್ನ ಹಂಚಿಕೊಂಡರು.
ಇದನ್ನೂ ಓದಿ: 61ನೇ ವಸಂತಕ್ಕೆ ಕಾಲಿಟ್ಟ 'ಕ್ರೇಜಿಸ್ಟಾರ್': ಕನಸುಗಾರನ ಬದುಕಿನ ಕುತೂಹಲದ ಸಂಗತಿಗಳು