ಸಿನಿಮಾ ಎಂಬ ಬಣ್ಣದ ಲೋಕ ಅನೇಕರ ಬದುಕನ್ನೇ ಬದಲಾಯಿಸಿದೆ. ಅದೆಷ್ಟೋ ನಟ ನಟಿಯರಿಗೆ ಒಳ್ಳೊಳ್ಳೆ ಅವಕಾಶಗಳನ್ನು ನೀಡಿ ಹಿಟ್ ಸ್ಟಾರ್ಗಳನ್ನಾಗಿ ಮಾಡಿದೆ. ಈ ಸಾಲಿಗೆ ನಟ ಕೋಮಲ್ ಕುಮಾರ್ ಕೂಡ ಸೇರಿದ್ದಾರೆ. ಕಾಮಿಡಿ ಹಾಗೂ ನಾಯಕನ ಸ್ನೇಹಿತನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆದ ನಟ ಕೋಮಲ್ ಗೋವಿಂದಾಯ ನಮಃ ಸಿನಿಮಾದ ಮೂಲಕ ಬಹು ಬೇಡಿಕೆಯ ನಟರಾದರು.
ಕಿಚ್ಚ ಸುದೀಪ್ ಅವರ ಸೂಪರ್ ಹಿಟ್ ಸಿನಿಮಾವಾದ ಕೆಂಪೇಗೌಡ 2 ನಂತರ ಚಿತ್ರ ರಂಗದಿಂದ ಕೆಲ ಕಾಲ ಕೋಮಲ್ ದೂರವೇ ಉಳಿದಿದ್ದರು. ಕಾಲಾಯ ನಮಃ ಚಿತ್ರದ ಮೂಲಕ ಮತ್ತೆ ಗುಡ್ ಕಮ್ ಬ್ಯಾಕ್ ಆಗುತ್ತಿರುವ ಕೋಮಲ್ ಸದ್ಯ ಮೂರು ನಾಲ್ಕು ಸಿನಿಮಾಗಳನ್ನು ಮಾಡುತ್ತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರೋಲೆಕ್ಸ್, ಕಾಲಾಯ ನಮಃ, ಎಲಾ ಕುನ್ನಿ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿರುವ ಕೋಮಲ್ ಇದೀಗ ಸ್ಯಾಂಡಲ್ವುಡ್ ನಲ್ಲಿ ಉಂಡೆನಾಮ ಹಾಕಲು ರೆಡಿಯಾಗಿದ್ದಾರೆ.
ಇದೇನಾಪ್ಪ ಉಂಡೆನಾಮ ಅಂತೀರಾ? ಹೌದು. ಉಂಡೆನಾಮ ಅನ್ನೋದು ಕೋಮಲ್ ಕುಮಾರ್ ಅವರ ಮುಂದಿನ ಸಿನಿಮಾದ ಶೀರ್ಷಿಕೆ. ಈ ಚಿತ್ರದ ಟೈಟಲ್ ಅನ್ನು ಸ್ಯಾಂಡಲ್ವುಡ್ನ ಕೆಲ ಸೆಲೆಬ್ರಿಟಿಗಳು ಹೇಳುವುದರ ಮುಖಾಂತರ ವಿನೂತನವಾಗಿ ಅನಾವರಣಗೊಳಿಸಿದ್ದಾರೆ. ಜೊತೆಗೆ ಚಿತ್ರದ ಶೀರ್ಷಿಕೆ ಕೇಳುವಾಗಲೇ ಇದೊಂದು ಕಂಪ್ಲೀಟ್ ಕಾಮಿಡಿ ಸಿನಿಮಾ ಅನ್ನೋದು ಗೊತ್ತಾಗುತ್ತೆ.
ಅರ್ಧ ಭಾಗದಷ್ಟು ಶೂಟಿಂಗ್ ಮುಗಿಸಿರೋ ಉಂಡೆನಾಮ ಚಿತ್ರದಲ್ಲಿ ಕೋಮಲ್ ಜೊತೆ ಧನ್ಯಾ ಬಾಲಕೃಷ್ಣ ಜೋಡಿಯಾಗಿದ್ದಾರೆ. ಇವರ ಜೊತೆಗೆ ಹರೀಶ್ ರಾಜ್, ತಬಲಾನಾಣಿ, ಅಪೂರ್ವ, ವೈಷ್ಣವಿ, ತನಿಷ ಕುಪ್ಪಂಡ, ಬ್ಯಾಕ್ ಜನಾರ್ಧನ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಎನ್.ಕೆ. ಸ್ಟುಡಿಯೋಸ್ ಅಡಿಯಲ್ಲಿ ಸಿ ನಂದ ಕಿಶೋರ್ ಅವರು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಸೆಲೀನ ಗೊಮೆಜ್‌ಗೆ 400 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್! ಈ ಸಾಧನೆ ಮಾಡಿದ ಮೊದಲ ಮಹಿಳೆ
ಮಜಾ ಟಾಕೀಸ್, ರಾಬರ್ಟ್ ಖ್ಯಾತಿಯ ಸಂಭಾಷಣೆಗಾರ ಕೆ.ಎಲ್.ರಾಜಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನುಳಿದಂತೆ ಶ್ರೀಧರ್ ಸಂಭ್ರಮ ಅವರ ಸಂಗೀತ, ನವೀನ್ ಕುಮಾರ್ ಛಾಯಾಗ್ರಾಹಣ, ಕೆ.ಎಮ್.ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಏಪ್ರಿಲ್ 14 ರಂದು ರಾಜ್ಯಾದ್ಯಂತ ಉಂಡೆನಾಮ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಅಲ್ಲದೇ ತುಂಬಾ ಸಮಯದ ನಂತರ ನಗುವಿನ ಕಚಗುಳಿಯಿಡಲು ಕೋಮಲ್ ಬರ್ತಾ ಇದ್ದಾರೆ.
ಕೋಮಲ್ ಚಿತ್ರರಂಗಕ್ಕೆ ರೀ ಎಂಟ್ರಿ: ಮನುಷ್ಯನ ಜೀವನದಲ್ಲಿ ಗ್ರಹಗಳ ಪ್ರಭಾವ ಅಪಾರ. ನಾವು ಜಾತಕ, ಭವಿಷ್ಯ, ದೇವರು, ಆಚರಣೆಗಳೆಲ್ಲವನ್ನೂ ನಂಬುವವರು. ಅಣ್ಣ ಜಗ್ಗೇಶ್ ಅವರು ನನ್ನ ಜಾತಕದಲ್ಲಿ ಕೇತು ದೆಸೆ ನಡೆಯುತ್ತಿದೆ, ಜಾಗೃತೆ ವಹಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆ ನಾನು ಐದು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದೆ ಎಂದು ಕಾಲಾಯ ನಮಃ ಸಿನಿಮಾ ಶೂಟಿಂಗ್ ಆರಂಭವಾದ ವೇಳೆ ನಟ ಕೋಮಲ್ ತಿಳಿಸಿದ್ದರು.
ಇದನ್ನೂ ಓದಿ: 50 ದೇಶ, 5 ಭಾಷೆ: ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ 'ಕಬ್ಜ'