ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಮಾಡುತ್ತಾ, ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಾ ವಿವಿಧ ಪಾತ್ರಗಳಲ್ಲಿ ತಮ್ಮದೇ ಆದ ವಿಭಿನ್ನ ನಟನೆಯ ಮೂಲಕ ಚಂದನವನದ ನವರಸ ನಾಯಕನಾದವರು ನಟ ಜಗ್ಗೇಶ್. ತಮ್ಮ 8ಎಮ್ ಎಮ್ ಸಿನಿಮಾ ಬಳಿಕ ಜಗ್ಗೇಶ್ ಅಭಿನಯದ ಯಾವ ಚಿತ್ರಗಳು ಬಿಡುಗಡೆ ಆಗಿಲ್ಲ. ಇದೀಗ ವಿಭಿನ್ನ ಕಥಾ ಹಂದರವುಳ್ಳ ರಾಘವೇಂದ್ರ ಸ್ಟೋರ್ಸ್ ಹಾಗು ತೋತಾಪುರಿ ಎಂಬ ಎರಡು ಚಿತ್ರಗಳಲ್ಲಿ ಜಗ್ಗೇಶ್ ಅಭಿನಯಸಿರುವುದು ನಮಗೆಲ್ಲ ತಿಳಿದಿರುವ ವಿಚಾರ. ಜಗ್ಗೇಶ್ ಸಿನಿಮಾ ಜೀವನದಲ್ಲಿ ಅಡುಗೆ ಭಟ್ಟನ ಪಾತ್ರ ಮಾಡಿರೋ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿದೆ. ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಹಾಗು ಯುವರತ್ನದಂತ ಚಿತ್ರಗಳನ್ನು ನಿರ್ದೇಶನ ಮಾಡಿರೋ ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ಸದ್ಯ ಟೀಸರ್ ನಿಂದಲೇ ಭರವಸೆ ಹುಟ್ಟಿಸಿರೋ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿನ ಜಗ್ಗೇಶ್ ಪಂಚಿಂಗ್ ಡೈಲಾಗ್ ಹಾಗು ಮ್ಯಾನರಿಸಂ ಅದ್ಭುತವಾಗಿ ಮೂಡಿಬಂದಿದೆ. ಈ ರಾಘವೇಂದ್ರ ಸ್ಟೋರ್ಸ್ ಹಾಗೂ ಜಗ್ಗೇಶ್ ಅವರಿಗೆ ಒಂದು ನಂಟು ಇದ್ದು, ಈ ಬಗ್ಗೆ ತುಂಬಾ ಮಂದಿಗೆ ಗೊತ್ತಿಲ್ಲ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ 'ರಾಘವೇಂದ್ರ ಸ್ಟೋರ್ಸ್' ಎನ್ನುವ ಹೋಟೆಲ್ ಇದೆ. ಈ ಹೋಟೆಲ್ ಗೆ ಹಲವು ವರ್ಷಗಳ ಇತಿಹಾಸ ಇದೆ. ಈ ರಾಘವೇಂದ್ರ ಸ್ಟೋರ್ಸ್ ಜಗ್ಗೇಶ್ ಅವರ ಮನೆಯ ಹಿಂಭಾಗದಲ್ಲೇ ಇದ್ದು, ನಟ ಜಗ್ಗೇಶ್ ಅವರಿಗೆ ಇಲ್ಲಿನ ಇಡ್ಲಿ, ವಡೆ ಅಂದರೆ ಪಂಚಪ್ರಾಣ.
ಸಿನಿಮಾದಲ್ಲಿ ಜಗ್ಗೇಶ್ ಗೆ ಜೋಡಿಯಾಗಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಹೊಂಬಾಳೆ ಫಿಲ್ಮ್ ಸಂಸ್ಥೆ ವರಮಹಾಲಕ್ಷ್ಮೀ ಹಬ್ಬಕ್ಕೆ ಅಂದ್ರೆ 5.8.2022ರಂದು ರಾಘವೇಂದ್ರ ಸ್ಟೋರ್ಸ್ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಆದರೆ ಇದು ತೋತಾಪುರಿ ಸಿನಿಮಾ ನಿರ್ಮಾಪಕ ಕೆ.ಎ ಸುರೇಶ್ ಅವರಿಗೆ ಬೇಸರ ಮೂಡಿಸಿದೆ. ಯಾಕೆಂದರೆ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾವನ್ನು, ರಾಘವೇಂದ್ರ ಸ್ಟೋರ್ಸ್ ಸಿನಿಮಾಗಿಂತ ಮುಂಚಿತವಾಗಿ ಚಿತ್ರೀಕರಣ ಮಾಡಿ ವರಮಹಾಲಕ್ಷ್ಮೀ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಕೆ.ಎ ಸುರೇಶ್ ಹೇಳಿದರು. ಆದರೆ ಈ ಬಗ್ಗೆ ಘೋಷಣೆ ಮಾಡಿರಲಿಲ್ಲ. ಆದರೆ ತೋತಾಪುರಿ ಸಿನಿಮಾಗಿಂತ ಮುಂಚೆ, ರಾಘವೇಂದ್ರ ಸ್ಟೋರ್ಸ್ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿರೋದು ತೋತಾಪುರಿ ಸಿನಿಮಾದ ನಿರ್ಮಾಪಕ ಕೆ.ಎ ಸುರೇಶ್ ಹಾಗು ಸಿನಿಮಾ ನಿರ್ದೇಶಕ ವಿಜಯ ಪ್ರಸಾದ್ ಗೆ ಬೇಸರ ಮೂಡಿಸಿದೆ ಎಂದು ಹೇಳಲಾಗ್ತಿದೆ. ಸದ್ಯ ಟ್ರೈಲರ್ ಹಾಗು ಹಾಡುಗಳಿಂದ ಕ್ರೇಜ್ ಹುಟ್ಟಿಸಿರೋ ತೋತಾಪುರಿ ಸಿನಿಮಾ ಮತ್ತು ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಓದಿ : ಅಲ್ಲಮ ಪ್ರಭು ಬಗ್ಗೆ ಸಿನಿಮಾ ಬರುತ್ತಿರುವುದು ಹೆಮ್ಮೆಯ ವಿಷಯ: ಪ್ರಮೋದ್ ಮುತಾಲಿಕ್