ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಯಾರು, ಯಾವಾಗ ಸ್ಟಾರ್ ಆಗ್ತಾರೆ? ಎಂದು ಯಶಸ್ವಿ ನಿರ್ದೇಶಕರಾಗ್ತಾರೆ? ಅನ್ನೋದನ್ನು ಊಹಿಸೋದು ಕಷ್ಟ. ಪ್ರತಿಭೆ, ಶ್ರಮ ಜೊತೆಗೆ ಅದೃಷ್ಟ ಇದ್ರೆ ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಉದಾಹಣೆಗಳು ನಮ್ಮ ಮುಂದಿವೆ. ಅಂತವರ ಸಾಲಿನಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಹಾಗಂತ ಇವರು ಏಕಾಏಕಿ ಸ್ಟಾರ್ ಆದವರಲ್ಲ. ಏಳು-ಬೀಳುಗಳನ್ನು ಕಂಡಿದ್ದು, ಸೂಪರ್ ಹಿಟ್ ಸಿನಿಮಾದ ಪಾತ್ರವೊಂದು ನಟನ ಸ್ಟಾರ್ ಡಮ್ ಹೆಚ್ಚಿಸಿತು.
![Dolly dhananjay](https://etvbharatimages.akamaized.net/etvbharat/prod-images/23-08-2023/19327738_aserhdg.jpg)
ಡಾಲಿ ಧನಂಜಯ್ ಜನ್ಮದಿನ: ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿರುವ ಡಾಲಿ ಧನಂಜಯ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1986ರ ಆಗಸ್ಟ್ 23ರಂದು ಹಾಸನ ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಜನಿಸಿದ ಇವರು ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟರಾಕ್ಷಸ ಖ್ಯಾತಿಯ ಧನಂಜಯ್ ಅವರಿಗೆ ಕುಟುಂಬಸ್ಥರು, ಆಪ್ತರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಡಾಲಿ ಧನಂಜಯ್ ಬಾಲ್ಯ, ಶಿಕ್ಷಣ, ಸಿನಿಪಯಣ ಹೀಗಿದೆ ನೋಡಿ.
![Dolly dhananjay](https://etvbharatimages.akamaized.net/etvbharat/prod-images/23-08-2023/19327738_szdfjgesh.jpg)
ಓದಿನಲ್ಲಿ ಮುಂದು: ಧನಂಜಯ್ ತಂದೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು. ತಂದೆ ಶಿಕ್ಷಕರಾಗಿರುವ ಹಿನ್ನೆಲೆ ಮಗನಿಗೂ ಕೂಡ ಬಾಲ್ಯದಿಂದಲೇ ವಿದ್ಯೆ ಒಲಿದಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಧನಂಜಯ್ 7 ಹಾಗೂ ಮತ್ತು 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ಗಮನ ಸೆಳೆದಿದ್ದರು.
![Dolly dhananjay](https://etvbharatimages.akamaized.net/etvbharat/prod-images/23-08-2023/19327738_rvfhd.jpg)
ಸಿನಿಮಾ ಹೀರೋ ಆಗುವ ಕನಸು: ಓದಿನಲ್ಲಿ ಸದಾ ಮುಂದಿದ್ದ ಧನಂಜಯ್ ಅವರು ಬಾಲ್ಯದಿಂದಲೇ ನಾಟಕಗಳು, ಏಕಪಾತ್ರಾಭಿನಯ ಮತ್ತು ಬೀದಿ ನಾಟಕಗಳಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಅವರ ಈ ಕಲೆಗೆ ಮತ್ತಷ್ಟು ಸ್ಫೂರ್ತಿಯಾಗಿದ್ದು ವರನಟ ಡಾ. ರಾಜ್ ಕುಮಾರ್ ಸಿನಿಮಾಗಳು. ಅಣ್ಣಾವ್ರ ಸಿನಿಮಾಗಳನ್ನು ನೋಡಿ ಪ್ರಭಾವಿತರಾದ ಧನಂಜಯ್ ತಾನೂ ಕೂಡ ಸಿನಿಮಾ ಹೀರೋ ಆಗಬೇಕೆಂಬ ಕನಸು ಕಂಡಿದ್ರಂತೆ.
![Dolly dhananjay](https://etvbharatimages.akamaized.net/etvbharat/prod-images/23-08-2023/19327738_newss.jpg)
ಇನ್ಫೋಸಿಸ್ ಉದ್ಯೋಗಕ್ಕೆ ರಾಜೀನಾಮೆ-ನಾಟಕ ತಂಡಕ್ಕೆ ಸೇರ್ಪಡೆ: ಆದರೆ ಧನಂಜಯ್ ಉನ್ನತ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದು, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸುತ್ತಾರೆ. ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಾರೆ. ಇನ್ಫೋಸಿಸ್ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಕೂಡ ಸಿಕ್ಕಿತು. ಕೆಲ ತಿಂಗಳು ಇನ್ಫೋಸಿಸ್ ಉದ್ಯೋಗಿಯಾಗಿದ್ದ ಧನಂಜಯ್ ಅವರಿಗೆ ಬಣ್ಣದ ಲೋಕದ ಗೀಳು ಬಿಡುವುದಿಲ್ಲ. ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಜಿಪಿಐಇಆರ್ (GPIER) ಎಂಬ ಹವ್ಯಾಸಿ ನಾಟಕ ತಂಡ ಸೇರಿಕೊಳ್ತಾರೆ.
![Dolly dhananjay](https://etvbharatimages.akamaized.net/etvbharat/prod-images/23-08-2023/19327738_sbvrdgs.jpg)
2013ರಲ್ಲಿ ಸಿನಿಪಯಣ ಆರಂಭ: ಸಾಕಷ್ಟು ನಾಟಕಗಳಲ್ಲಿನ ಅಭಿನಯಿಸುತ್ತಿದ್ದ ಧನಂಜಯ್ ತಮ್ಮ ಪ್ರತಿಭೆಯಿಂದ ಹಿರಿಯ ರಂಗಾಯಣ ಕಲಾವಿದರಿಂದ ಮೆಚ್ಚುಗೆ ಗಳಿಸುತ್ತಾರೆ. ಒಮ್ಮೆ ನಾಟಕವೊಂದರಲ್ಲಿ ಧನಂಜಯ್ ಅಭಿನಯ ಕಂಡು ನಿರ್ದೇಶಕ ಗುರುಪ್ರಸಾದ್ ಮೆಚ್ಚಿ, ತಮ್ಮ ಚಿತ್ರದಲ್ಲಿ ಹೀರೋ ಪಟ್ಟ ನೀಡುತ್ತಾರೆ. ಅದುವೇ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರ. 2013ರಲ್ಲಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಧನಂಜಯ್, ಈ ಚಿತ್ರದಲ್ಲಿನ ಉತ್ತಮ ನಟನೆಗಾಗಿ ಸೈಮಾ ಉದಯೋನ್ಮುಖ ಉತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾರೆ.
ಸ್ಟಾರ್ ಡಮ್ ಹೆಚ್ಚಿಸಿದ ಡಾಲಿ ಪಾತ್ರ: ಈ ಚಿತ್ರದ ಬಳಿಕ ಧನಂಜಯ್, ರಾಟೆ, ಜೆಸ್ಸಿ, ಬದ್ಮಾಶ್ ಸಿನಿಮಾಗಳನ್ನು ಮಾಡ್ತಾರೆ. ಆದರೆ ಈ ಚಿತ್ರಗಳು ಅವರಿಗೆ ಅಷ್ಟೊಂದು ಹೆಸರು ತಂದುಕೊಡಲ್ಲ. ಆಗ ಅವರಿಗೆ ಒಂದು ಮಟ್ಟಿನ ಸ್ಟಾರ್ ಪಟ್ಟ ನೀಡಿದ ಚಿತ್ರ ಅಂದ್ರೆ ಗುರು ಪ್ರಸಾದ್ ನಿರ್ದೇಶನದ 'ಎರಡನೇ ಸಲ' ಚಿತ್ರ. ಬಳಿಕ ಹ್ಯಾಟ್ರಿಕ್ ಹೀರೋ ಶಿವ ರಾಜ್‍ಕುಮಾರ್ ಅಭಿನಯದಲ್ಲಿ, ಸೂರಿ ನಿರ್ದೇಶನದಲ್ಲಿ ಮೂಡಿಬಂದ ಟಗರು ಚಿತ್ರದಲ್ಲಿ 'ಡಾಲಿ'ಯಾಗಿ ಕಾಣಿಸಿಕೊಳ್ಳುತ್ತಾರೆ. ವಿಲನ್ ಲುಕ್ನಲ್ಲಿ ಧನಂಜಯ್ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಡಾಲಿ ಅಂತಾನೆ ಫೇಮಸ್ ಆಗ್ತಾರೆ. ಅಲ್ಲಿಂದ ಧನಂಜಯ್ ಸ್ಟಾರ್ ಡಮ್ ಹೆಚ್ಚಾಗುತ್ತದೆ. ಯಾವ ಮಟ್ಟಿಗೆ ಅಂದ್ರೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, 'ಭೈರವ ಗೀತಾ' ಸಿನಿಮಾ ಮಾಡ್ತಾರೆ. ಇದು ಕೂಡ ಅವರ ಸಿನಿಪಯಣಕ್ಕೆ ಪ್ಲಸ್ ಪಾಯಿಂಟ್ ಆಗುತ್ತೆ. ಬಳಿಕ ದಿ. ನಟ ಪುನೀತ್ ರಾಜ್‍ಕುಮಾರ್, ದರ್ಶನ್, ತೆಲುಗಿನ ಅಲ್ಲು ಅರ್ಜುನ್ ಅವರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Samantha: ಸೀರೆಯುಟ್ಟು ನ್ಯೂಯಾರ್ಕ್ ಸಿಟಿ ಸುತ್ತಿದ ಸಮಂತಾ ರುತ್ ಪ್ರಭು ಫೋಟೋಗಳಿಗೆ ಮನಸೋತ ಅಭಿಮಾನಿಗಳು
ಸ್ಟಾರ್ ನಟರ ಚಿತ್ರಗಳಲ್ಲಿ ಖಳನಾಯಕ ಪಾತ್ರದ ಜೊತೆಗೆ ನಟನಾಗಿ ರತ್ನನ್ ಪ್ರಪಂಚ, ಬಡವ ರಾಸ್ಕಲ್, ಗುರುದೇವ ಹೊಯ್ಸಳ, ಹೆಡ್ ಬುಷ್, ಮಾನ್ಸೂನ್ ರಾಗ ಹೀಗೆ ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಖತ್ ಸ್ಟಾರ್ ಡಮ್ ಸಂಪಾದಿಸಿದ್ದಾರೆ. ಸದ್ಯ ನಟನಾಗಿ, ನಿರ್ಮಾಪಕನಾಗಿ ಹೊಸ ಪ್ರತಿಭೆಗಳ ಚಿತ್ರಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಡಾಲಿ ಉತ್ತರಕಾಂಡ ಮತ್ತು ಹೆಸರಿಡದ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.