ಬೆಂಗಳೂರು: ಮಹಿಳೆಯೋರ್ವರಿಗೆ ಸಾಕು ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಚಾರಣೆ ಎದುರಿಸಿದ್ದಾರೆ. ಇಂದು ಆರ್.ಆರ್ ನಗರ ಪೊಲೀಸರ ಎದುರು ಜನಪ್ರಿಯ ನಟ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು. ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಸುಮಾರು 15 ನಿಮಿಷಗಳ ಕಾಲ ನಟ ದರ್ಶನ್ ಅವರ ವಿಚಾರಣೆ ನಡೆಸಿದ್ದಾರೆ.
ದರ್ಶನ್ ಅವರ ಸಾಕು ನಾಯಿ ಕಚ್ಚಿದ ಪ್ರಕರಣ: ಅಕ್ಟೋಬರ್ 28 ರಂದು ಖಾಸಗಿ ಆಸ್ಪತ್ರೆಯಲ್ಲಿದ್ದ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ದೂರುದಾರೆ, ಅಮಿತಾ ಜಿಂದಾಲ್ ಅವರು ನಟ ದರ್ಶನ್ ಮನೆ ಮುಂಭಾಗದಲ್ಲಿನ ರಸ್ತೆಯ ಖಾಲಿ ಜಾಗದಲ್ಲಿ ತಮ್ಮ ಕಾರ್ ಪಾರ್ಕ್ ಮಾಡಿದ್ದರು. ವಾಪಸ್ ತೆರಳಲು ಕಾರಿನ ಬಳಿ ಬಂದಾಗ ಅಕ್ಕ ಪಕ್ಕದಲ್ಲಿದ್ದ ಮೂರು ನಾಯಿಗಳನ್ನು ಕಂಡ ಅಮಿತಾ ಜಿಂದಾಲ್ ಅವರು ತಾವು ಕಾರ್ ಬಳಿ ಹೋಗಬೇಕು. ನಾಯಿಗಳನ್ನು ಕರೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ದರ್ಶನ್ ಅವರ ಮನೆ ಕೆಲಸಗಾರ ಗಲಾಟೆ ನಡೆಸಿದ್ದಾರೆಂದು ದೂರುದಾರೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ವಿರುದ್ಧ ದೂರು ನೀಡಿದ್ದರು. ಕಳೆದ ಮೂರು ದಿನಗಳ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಕೂಡ ಗೈರಾದ ಹಿನ್ನೆಲೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಅಂತಿಮವಾಗಿ ದರ್ಶನ್ ಇಂದು ವಿಚಾರಣೆಗೆ ಹಾಜರಾಗಿ 15 ನಿಮಿಷಗಳ ಕಾಲ ವಿಚಾರಣೆ ಎದುರಿಸಿದರು.
ಇದನ್ನೂ ಓದಿ: ಮಹಿಳೆಗೆ ಸಾಕು ನಾಯಿ ಕಚ್ಚಿದ ಪ್ರಕರಣ: ಠಾಣಾ ವಿಚಾರಣೆಗೆ ಹಾಜರಾದ ನಟ ದರ್ಶನ್
ಪೊಲೀಸರ ಮುಂದೆ ದರ್ಶನ್ ಹೇಳಿದ್ದೇನು? 15 ನಿಮಿಷಗಳ ಕಾಲ ವಿಚಾರಣೆ ಎದುರಿಸಿರುವ ನಟ ದರ್ಶನ್ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಘಟನೆ ನಡೆದಾಗ ನಾನು ಗುಜರಾತ್ನಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದೆ. ನಮ್ಮ ಹುಡುಗರಿಗೆ ಸರಿಯಾಗಿ ನೋಡಿಕೊಳ್ಳುವಂತೆ ಹೇಳಿದ್ದೆ. ಅಲ್ಲದೇ, ಕೇರ್ ಟೇಕರ್ಗಳಿಗೂ ಎಲ್ಲವನ್ನೂ ಸರಿಯಾಗಿ ನೋಡಿಕೊಳ್ಳುವಂತೆ ಸೂಚನೆ ಕೊಟ್ಟಿದ್ದೆ. ಮನೆ ಬಳಿ ಸಾಕಷ್ಟು ಅಭಿಮಾನಿಗಳು ಬರುತ್ತಿರುತ್ತಾರೆ. ಅಕ್ಕ - ಪಕ್ಕದ ಮನೆಗಳ ನಿವಾಸಿಗಳಿಗೂ ತೊಂದರೆಯಾಗಬಹುದು. ಯಾರೆ ಬಂದ್ರೂ ವಿಚಾರಿಸುವಂತೆ, ನೋಡಿಕೊಳ್ಳುವಂತೆ ಹೇಳಿದ್ದೆ. ಕಾರ್ ಪಾರ್ಕಿಂಗ್ ವಿಚಾರವಾಗಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಎಚ್ಚರ ವಹಿಸಬೇಕಿತ್ತು ಅಂತಾ ನಮ್ಮ ಹುಡುಗರಿಗೆ ಹೇಳಿದ್ದೇನೆ. ಅಮಿತಾ ಜಿಂದಾಲ್ ಅವರಿಗೆ ಪೆಟ್ಟಾದಾಗ ಅವರ ಆಸ್ಪತ್ರೆ ವೆಚ್ಚ ಭರಿಸುವಂತೆ ಹೇಳಿದ್ದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಭಿಮಾನಿಗೆ ನಟ ನಾನಾ ಪಾಟೇಕರ್ ಏಟು? ವಿಡಿಯೋ ವೈರಲ್