ಜೊತೆ ಜೊತೆಯಲಿ ಸೀರಿಯಲ್ನಿಂದ ನಟ ಅನಿರುದ್ಧ್ ಅವರನ್ನು ಕೈಬಿಡುವ ಜೊತೆಗೆ ಎರಡು ವರ್ಷ ಯಾವುದೇ ಚಾನಲ್ನ ಧಾರವಾಹಿಯಲ್ಲಿ ಅಭಿನಯಿಸಬಾರದು ಅಂತಾ ಕನ್ನಡ ಕಿರುತೆರೆ ನಿರ್ಮಾಪಕರ ಸಂಘದಿಂದ ಅನಿರುದ್ಧ್ ಅವರನ್ನು ಬ್ಯಾನ್ ಮಾಡಲಾಗಿದೆ. ಈ ವಿಚಾರವಾಗಿ ಹಾಗೂ ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್ ಮಾಡಿರುವ ಆರೋಪಗಳಿಗೆ ಈಗ ನಟ ಅನಿರುದ್ಧ್ ಜೆ.ಪಿ ನಗರದ ನಿವಾಸದಲ್ಲಿ ಉತ್ತರ ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ನಟ ಅನಿರುದ್ಧ್, ಜೊತೆ ಜೊತೆಯಲಿ ಧಾರವಾಹಿ ತಂಡ ನನ್ನ ಕುಟುಂಬ ಇದ್ದಂತೆ. ಕಿರುತೆರೆ ಲೋಕದಲ್ಲಿ ಹಲವು ದಾಖಲೆಗಳನ್ನು ಮಾಡಿರುವ ಧಾರಾವಾಹಿ. ನನಗೆ ಹೆಸರು ತಂದು ಕೊಟ್ಟಿರುವ ಧಾರಾವಾಹಿ. ಆದರೀಗ ನಿರ್ದೇಶಕರು ಹಾಗು ನಿರ್ಮಾಪಕರ ಬಗ್ಗೆ ಮಾತನಾಡುವ ಪರಿಸ್ಥಿತಿ ಬಂದಿದೆ. ಜಗದೀಶ್ ಅವರು ಮಾಡಿರುವ ಆರೋಪಕ್ಕೆ ನಾನು ಮಾಧ್ಯಮಗಳ ಮುಂದೆ ಕುಳಿತು ಉತ್ತರ ಕೊಡುವ ಸಂದರ್ಭ ಬಂದಿದೆ. ನಾನು ಧಾರಾವಾಹಿ ಚೆನ್ನಾಗಿ ಮೂಡಿ ಬರಲಿ ಅಂತಾ ಕೆಲ ಸಲಹೆಗಳನ್ನು ಕೊಟ್ಟಿದ್ದೆ. ಅದೇ ತಪ್ಪಾಗಿದೆ. ನನ್ನಿಂದ ಸೀರಿಯಲ್ ತಂಡದ ಮೇಲೆ ಸಾಕಷ್ಟು ಸಮಸ್ಯೆ ಆಗಿದೆ ಅಂತೀರಲ್ವಾ, ನಿಮ್ಮಿಂದ ಕಲಾವಿದರಿಗೆ ಸಮಸ್ಯೆ ಆಗಿಲ್ವಾ? ನಿಮ್ಮಿಂದ ಕೆಲ ಕಲಾವಿದರು ಕಣ್ಣೀರು ಇಟ್ಟಿದ್ದಾರೆ ಎಂದು ಆರೋಪಿಸಿದರು.
![jothe jotheyali team](https://etvbharatimages.akamaized.net/etvbharat/prod-images/kn-bng-02-aroor-jagadish-aroppagalige-aniruddha-kotta-utharagalu-7204735_20082022150124_2008f_1660987884_716.jpg)
ಒಂದೂವರೆ ವರ್ಷ ಅವರು ಹೇಳಿದ ಸಮಯದಲ್ಲಿ, ನೈಟ್ ಆ್ಯಂಡ್ ಡೇ ಕೆಲಸ ಮಾಡಿದ್ದೇನೆ. ಕೆಲವೊಮ್ಮೆ ನಾನು ರಾತ್ರಿ ಊಟ ಮಾಡಲು ಆಗದ ಸಮಯದಲ್ಲಿ ಹಣ್ಣು ತಿಂದು ಮಲಗಿದ್ದೇನೆ. ಜಗದೀಶ್ ಸರ್ ಹೇಳುವ ಹಾಗೆ ಫ್ಯಾಕ್ಟರಿಯಲ್ಲಿ ಈ ಸಮಸ್ಯೆ ಆರಂಭವಾಗಿದ್ದಲ್ಲ. ಅದಕ್ಕೂ ಮುಂಚೆಯೇ ಸಮಸ್ಯೆ ಆರಂಭ ಆಗಿದೆ ಎಂದು ತಿಳಿಸಿದರು.
![jothe jotheyali team](https://etvbharatimages.akamaized.net/etvbharat/prod-images/kn-bng-02-aroor-jagadish-aroppagalige-aniruddha-kotta-utharagalu-7204735_20082022150124_2008f_1660987884_607.jpg)
ನಾನು ಫೈವ್ ಸ್ಟಾರ್ ಹೋಟೆಲ್ನಲ್ಲಿ ಊಟ ಮಾಡಬೇಕು ಅಂತಾ ಕೇಳಿಲ್ಲ. ನಾನು ಸಾಕಷ್ಟು ಬಾರಿ ಶೂಟಿಂಗ್ ಸೆಟ್ನಲ್ಲೇ ಊಟ ಮಾಡಿದ್ದೇನೆ. ನನಗೆ ಮೊದಲ ತಿಂಗಳು ಕೊಡಬೇಕಾದ ಸಂಭಾವನೆಯಲ್ಲಿ ಕಟ್ ಮಾಡಿ ಕೊಟ್ಟರು. ಅದು ಅವ್ರಿಗೆ ಗೊತ್ತಿಲ್ವ ಎಂದು ಸಂಭಾವನೆ ವಿಚಾರವಾಗಿ ಅನಿರುದ್ಧ್ ಪ್ರತಿಕ್ರಿಯೆ ನೀಡಿದರು.
![jothe jotheyali team](https://etvbharatimages.akamaized.net/etvbharat/prod-images/kn-bng-02-aroor-jagadish-aroppagalige-aniruddha-kotta-utharagalu-7204735_20082022150124_2008f_1660987884_375.jpg)
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕೆಲಸ ಮಾಡುವವರಲ್ಲಿ ಅನಿರುದ್ಧ್ ಕಾರಣವಾಗಿ ಸ್ವಲ್ಪ ಜನರನ್ನು ತೆಗೆಯಬೇಕಾಯಿತು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಟಿ ಮೇಘಾ ಶೆಟ್ಟಿಯನ್ನು ತೆಗೆಯೋದಕ್ಕೆ ಹೇಳಿದಾಗ ನಾನು ಬೇಡ ಅಂತಾ ಹೇಳಿದ್ದು ನೆನಪಿಲ್ವಾ ಎಂದು ಪ್ರಶ್ನಿಸಿದರು. ಮಾನಿಟರ್ ವಿಚಾರವಾಗಿ ಮಾತನಾಡಿದ ಅನಿರುದ್ಧ್, ಅಭಿನಯಿಸಿ ಒಮ್ಮೆ ಬಂದು ಮಾನಿಟರ್ ನೋಡಿ ಇನ್ನೂ ಚೆನ್ನಾಗಿ ಅಭಿನಯಿಸುವ ಉದ್ದೇಶದಿಂದ ಮತ್ತೆ ನಾನು ಮಾನಿಟರ್ ನೋಡುತ್ತಿದ್ದೆ. ಸಿನಿಮಾಗಳಲ್ಲಿ ಈ ರೀತಿ ಇತ್ತು. ಅದು ನಮ್ಮ ನಟನೆಯನ್ನು ಅಭಿವೃದ್ಧಿ ಮಾಡಿಕೊಳ್ಳೋದಕ್ಕೆ ಸಹಾಯ ಆಗುತ್ತೆ ಅಂತಾ ನಾನು ಮಾನಿಟರ್ ನೋಡುತ್ತಿದ್ದೆ. ಅದರಿಂದ ಏನು ಸಮಸ್ಯೆ ಆಗಿದೆ ಎಂದು ಪ್ರಶ್ನಿಸಿದರು.
![jothe jotheyali team](https://etvbharatimages.akamaized.net/etvbharat/prod-images/kn-bng-02-aroor-jagadish-aroppagalige-aniruddha-kotta-utharagalu-7204735_20082022150124_2008f_1660987884_176.jpg)
ಸೀರಿಯಲ್ ಚೆನ್ನಾಗಿ ಆಗಬೇಕು ಅಂತಾ ನಾನು ಕೆಲ ಪ್ರಶ್ನೆಗಳನ್ನು ಮಾಡಿದ್ದೆ. ಸಲಹೆ ನೀಡಿದ್ದೇ ಈಗ ನನಗೆ ಮುಳುವಾಯಿತು. ನನಗೆ ನೋಟಿಸ್ ಕೊಟ್ಟಿದ್ದಾರೆ, ಇದು ದುರಂತದ ವಿಷಯ ಅಂತಾ ಜಗದೀಶ್ ಅವರಿಗೆ ಮೆಸೇಜ್ ಮಾಡಿದ್ದೇನೆ. ಅವರು ಫೋನ್ ತೆಗಿದಿಲ್ಲ ಎಂದು ನಟ ಅನಿರುದ್ಧ್ ತಿಳಿಸಿದರು.
ಇದನ್ನೂ ಓದಿ: ಜೊತೆ ಜೊತೆಯಲಿ ಸೀರಿಯಲ್ನಿಂದ ನಟ ಅನಿರುದ್ಧ್ಗೆ ಗೇಟ್ ಪಾಸ್... ನಿರ್ದೇಶಕ ಆರೂರು ಜಗದೀಶ್ ಸ್ಪಷ್ಟನೆ
ಎರಡು ವರ್ಷದವರೆಗೆ ಬ್ಯಾನ್ ಮಾಡಿದ್ದಾರೆ. ಈ ಬಗ್ಗೆ ಎಲ್ಲಾ ನಿರ್ಮಾಪಕರು ಬಂದು ಮಾತನಾಡಬಹದಿತ್ತು. ಆದರೆ ಆ ಕೆಲಸವನ್ನು ಯಾರೂ ಮಾಡಲಿಲ್ಲ. ಅದು ನನ್ನ ಹಣೆಬರಹ. ನನಗೆ ಎಲ್ಲಿ ಊಟ ಮಾಡಬೇಕು ಅಂತಾ ಆ ದೇವರು ಬರೆದಿದ್ದಾನೋ ಅಲ್ಲಿ ನನಗೆ ಊಟ ಸಿಗುತ್ತದೆ. ಕನ್ನಡ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷರ ಹತ್ತಿರ ಮಾತನಾಡಿದ್ದೇನೆ. ಅವರು ಕೂಡ ಈ ಘಟನೆ ಬಗ್ಗೆ ತುಂಬಾ ಬೇಸರ ವ್ಯಕ್ತಪಡಿಸಿದರು ಎಂದು ಅನಿರುದ್ಧ್ ವಿವರಿಸಿದರು.