ಸಿನಿಮಾ ಎಂಬ ಕಲರ್ಫುಲ್ ದುನಿಯಾದಲ್ಲಿ ಬೆಳಗಬೇಕಾದರೆ ಪ್ರತಿಭೆ, ಶ್ರಮದೊಂದಿಗೆ ಅದೃಷ್ಟವೂ ಇರಬೇಕು ಎಂಬ ಮಾತಿದೆ. ಇದು ಕೆಲವೊಮ್ಮೆ ನಿಜ ಕೂಡಾ. ನಟ ಅಭಿಷೇಕ್ ಅಂಬರೀಶ್ ವಿಷಯವನ್ನು ಇಲ್ಲಿ ಉದಾಹರಿಸಬಹುದು. 'ಅಮರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಭಿಷೇಕ್ ಅಂಬರೀಶ್ ಅವರಿಗೆ ಚೊಚ್ಚಲ ಚಿತ್ರ ದೊಡ್ಡ ಮಟ್ಟಿನ ಹೆಸರು ತಂದುಕೊಡಲಿಲ್ಲ.
ಇದಾದ ನಂತರದಲ್ಲಿ 'ಬ್ಯಾಡ್ ಮ್ಯಾನರ್ಸ್' ಮೂಲಕ ಜೂನಿಯರ್ ಅಂಬರೀಶ್ ಕನ್ನಡ ಸಿನಿಪ್ರಿಯರ ಮನ ಗೆಲ್ಲುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ದುನಿಯಾ ಸೂರಿ ನಿರ್ದೇಶನದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರ ಎಫೆಕ್ಟ್ ಅಭಿಷೇಕ್ ನಟನೆಯ ಮೂರನೇ ಸಿನಿಮಾದ ಮೇಲಾಗಿದೆ ಎಂದು ಹೇಳಲಾಗುತ್ತಿದೆ.
ಅಭಿಷೇಕ್ ಅಂಬರೀಶ್ ಅಭಿನಯದ ಮೂರನೇ ಚಿತ್ರ 'ಕಾಳಿ' ಕೆಲಸ ನಿಂತು ಹೋಗಿರುವ ಸುದ್ದಿ ಬಂದಿದೆ. ಕಳೆದ ವರ್ಷ 'ಕಾಳಿ' ಅನೌನ್ಸ್ ಆಗಿತ್ತು. ಪೈಲ್ವಾನ್ ನಿರ್ದೇಶಕ ಎಸ್.ಕೃಷ್ಣ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದ ಚಿತ್ರವಿದು. 2022ರ ನವೆಂಬರ್ನಲ್ಲಿ ಮುಹೂರ್ತ ಕಾರ್ಯಕ್ರಮವು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತ್ತು. 2023ರ ಮೇನಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದೇ ಹೇಳಲಾಗಿತ್ತು.
ಆದರೆ 'ಬ್ಯಾಡ್ ಬ್ಯಾನರ್ಸ್' ಕೆಲಸಗಳು ಆ ಹೊತ್ತಿಗೆ ಪೂರ್ಣಗೊಂಡಿರಲಿಲ್ಲ. ಅಲ್ಲದೇ, ಜೂನ್‍ನಲ್ಲಿ ಅಭಿಷೇಕ್ ಮದುವೆ ನಿಗದಿಯಾಗಿದ್ದ ಕಾರಣ, 'ಕಾಳಿ' ಚಿತ್ರವನ್ನು ಮುಂದೂಡಲಾಯಿತು. ಆದಾಗ್ಯೂ, 'ಬ್ಯಾಡ್ ಮ್ಯಾನರ್ಸ್' ಬಿಡುಗಡೆಯಾದರೂ ಕಾಳಿ ಸೂಚನೆಯೇ ಇಲ್ಲ. ಮೂಲಗಳ ಪ್ರಕಾರ, 'ಕಾಳಿ' ಚಿತ್ರವನ್ನು ಕೃಷ್ಣ ಕೈಬಿಟ್ಟಿದ್ದಾರಂತೆ.
ಇದನ್ನೂ ಓದಿ: 'ಕಾಟೇರ' ಪೈರಸಿ ಮಾಡಿದರೆ ಸ್ಪೆಷಲ್ ಟ್ರೀಟ್‌ಮೆಂಟ್: ನಟ ದರ್ಶನ್ ಎಚ್ಚರಿಕೆ
ಕಾಳಿ 90ರ ದಶಕದ ಕಾಲಘಟ್ಟದ ಚಿತ್ರಕಥೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ನಡೆದ ಗಲಭೆಯ ಹಿನ್ನೆಲೆ ಹೊಂದಿದೆ. ಈ ಚಿತ್ರವನ್ನು ಎಸ್.ಕೃಷ್ಣ ನಿರ್ದೇಶಿಸಿದರೆ, ಆರ್ಆರ್ಆರ್ ಮೋಷನ್ ಪಿಕ್ಚರ್ಸ್ ಬ್ಯಾನರ್‌ನಡಿ ಅವರ ಪತ್ನಿ ಸ್ವಪ್ನ ಕೃಷ್ಣ ನಿರ್ಮಿಸುವುದಾಗಿ ಸುದ್ದಿಯಾಗಿತ್ತು.
ಇದನ್ನೂ ಓದಿ: ನಾಳೆ ಅಮೀರ್ ಖಾನ್ ಮಗಳ ಮದುವೆ: ಇರಾ-ನೂಪುರ್ ನಿವಾಸಕ್ಕೆ ವಿಶೇಷ ದೀಪಾಲಂಕಾರ
ಚಿತ್ರದ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದರು. ಅವರೂ ಸಹ ಮುಹೂರ್ತದಲ್ಲಿ ಭಾಗಿಯಾಗಿದ್ದರು. ಇನ್ನೂ, ಚರಣ್ ರಾಜ್ ಅವರ ಸಂಗೀತ ಮತ್ತು ಕರುಣಾಕರಣ್ ಅವರ ಛಾಯಾಗ್ರಹಣ ಚಿತ್ರಕ್ಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿರೋದು ಅಭಿಷೇಕ್ ಅಂಬರೀಶ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಹಾಗಾದರೆ ಅಭಿಷೇಕ್ ಮತ್ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಸಿನಿಪ್ರಿಯರದ್ದು.