ಮಂಡ್ಯ: ಜೂನ್ 5 ರಂದು ದಾಂಪತ್ಯಕ್ಕೆ ಕಾಲಿರಿಸಿದ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಬೀಗರ ಔತಣಕೂಟ ನಾಳೆ ಸಕ್ಕರೆನಾಡು ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಲಿದೆ. ಎಷ್ಟೇ ಸಾವಿರ ಜನ ಬಂದ್ರೂ ಊಟದ ವ್ಯವಸ್ಥೆ ಮಾಡಲು ಸಕಲ ಸಿದ್ಧತೆ ಮಾಡಲಾಗುತ್ತಿದೆ. ಅಂಬರೀಶ್ಗೆ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟವನ್ನು ನಾಳೆ ತಯಾರಿಸಲಾಗುತ್ತದೆ.
ಸಿದ್ದತೆ ಪರಿಶೀಲನೆ ಬಳಿಕ ಮಾಹಿತಿ ನೀಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, "ಬೆಳಗ್ಗೆ 11 ಗಂಟೆಯಿಂದಲೇ ಬೀಗರ ಊಟ ಆರಂಭವಾಗಲಿದ್ದು, ಸಿನಿಮಾ ಮತ್ತು ರಾಜಕೀಯದಲ್ಲಿ ಅಂಬಿ ಕುಟುಂಬ ಪರ ನಿಂತ ಎಲ್ಲರಿಗೂ ಊಟ ಹಾಕಿಸಲಾಗುತ್ತದೆ. ಸ್ಥಳೀಯ ಮೂವರು ಬಾಣಸಿಗರ ನೇತೃತ್ವದಲ್ಲಿ, 50 ಸಾವಿರಕ್ಕೂ ಅಧಿಕ ಮಂದಿಗೆ ಊಟ ಹಾಕಿಸಲು ತಯಾರಿ ನಡೆಸಲಾಗುತ್ತಿದೆ. 7 ಟನ್ ಮಟನ್, 7 ಟನ್ ಚಿಕನ್ನಲ್ಲಿ ಅದ್ದೂರಿ ಬಾಡೂಟ ಖಾದ್ಯ ತಯಾರಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.
ಅಭಿಮಾನಿಗಳಿಗೆ 'ಅಭಿವಾ' ಕರೆಯೋಲೆ: ಅಂಬರೀಶ್ ಅಭಿಮಾನಿಗಳನ್ನು ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಆಮಂತ್ರಿಸಿದ್ದಾರೆ. "ಇದೇ 16ರಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ನಮ್ಮಿಬ್ಬರ ಬೀಗರ ಔತಣಕೂಟ ಏರ್ಪಡಿಸಲಾಗಿದೆ. ಎಲ್ಲ ಅಂಬರೀಶ್ ಅಭಿಮಾನಿಗಳು, ಎಲ್ಲಾ ಹಿತೈಶಿಗಳು, ಸ್ನೇಹಿತರು, ಆತ್ಮೀಯರು ಎಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ನಮ್ಮ ವಿನಂತಿ" ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಮಾರಕಾಸ್ತ್ರ' ಚಿತ್ರಕ್ಕಾಗಿ ಮತ್ತೆ ಖಾಕಿ ತೊಟ್ಟ ಆ್ಯಕ್ಷನ್ ಕ್ವೀನ್ ಮಾಲಾಶ್ರೀ
ಅಂಬಿ ಕನಸಿನಂತೆ ಬೀಗರೂಟ ಏರ್ಪಾಡು: ಅಂಬರೀಶ್ ಕನಸಿನಂತೆಯೇ ಮದುವೆ ಕಾರ್ಯಗಳು ನಡೆದಿದೆ. ಅಂಬಿ ಹುಟ್ಟೂರಿನಲ್ಲೇ ಅಭಿಷೇಕ್ ಮದುವೆಯ ಬೀಗರ ಔತಣಕೂಟ ಮಾಡಬೇಕು ಎಂಬುದು ರೆಬಲ್ ಸ್ಟಾರ್ ಆಸೆಯಾಗಿತ್ತು. ಅದರಂತೆ ಅಂಬರೀಶ್ ಕನಸನ್ನು ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ನನಸು ಮಾಡುತ್ತಿದ್ದಾರೆ. ನಾಳೆ ಇಡೀ ಮಂಡ್ಯಕ್ಕೆ ಆಮಂತ್ರಣ ನೀಡಲಾಗಿದೆ.
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಜೂನ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹವಾದರು. ಜೂನ್ 7 ರಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮವು ನೆರವೇರಿದೆ. ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಆಪ್ತರು, ಸ್ನೇಹಿತರು, ಅಭಿಮಾನಿಗಳು ಭಾಗಿಯಾಗಿದ್ದರು.
ಬಳಿಕ ಜೂನ್ 10 ರಂದು ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸಂಗೀತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸಂಗೀತ ಕಾರ್ಯಕ್ರಮವನ್ನು ಅವಿವಾ ಬಿದ್ದಪ್ಪ ತಂದೆ ಪ್ರಸಾದ್ ಬಿದ್ದಪ್ಪ ಆಯೋಜಿಸಿದ್ದರು. ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕನಸಿನ ರಾಣಿ ಮಾಲಾಶ್ರೀ, ಗುರುಕಿರಣ್, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್, ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ, ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ, ಮಂಚು ಮನೋಜ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಅನೇಕ ಭಾರತೀಯ ಚಿತ್ರರಂಗದ ತಾರೆಯರು ಭಾಗವಹಿಸಿದ್ದರು.
ಇದನ್ನೂ ಓದಿ: Daredevil Mustafa: 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ