ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೈಲರ್ನಿಂದಲೇ ಕ್ರೇಜ್ ಹುಟ್ಟಿಸಿರೋ ಸಿನಿಮಾ 777 ಚಾರ್ಲಿ. ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರವಿದು. ಇದೇ ತಿಂಗಳ 10ಕ್ಕೆ ಬಿಡುಗಡೆ ಆಗೋದಿಕ್ಕೆ ರೆಡಿಯಾಗಿರೋ 777 ಚಾರ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟ್ಯಂತರ ರೂಪಾಯಿ ಗಳಿಸಿದೆ.
ಒಬ್ಬ ಮನುಷ್ಯ ಹಾಗು ಶ್ವಾನದ ನಡುವಿನ ಬಾಂಧವ್ಯದ ಕಥೆಯನ್ನೊಳಗೊಂಡಿರುವ 777 ಚಾರ್ಲಿ ಸಿನಿಮಾದಲ್ಲಿ, ರಕ್ಷಿತ್ ಮತ್ತು ಚಾರ್ಲಿ ಎಂಬ ಶ್ವಾನದ ಕಾಂಬಿನೇಷನ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲ ಆಗುತ್ತೆ ಅನ್ನೋದು 777 ಚಾರ್ಲಿ ಚಿತ್ರದ ಕಥೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ, ಬಾಬಿ ಸಿಂಹ, ಬೇಬಿ ಶಾರ್ವರಿ ಪಾತ್ರಗಳು ಕೂಡ ಇಂಪ್ರೆಸ್ ಆಗುವಂತಿದೆ.
ಸದ್ಯ ಟ್ರೈಲರ್ ಹಾಗು ಹಾಡುಗಳಿಂದ ದಕ್ಷಿಣ ಭಾರತದಲ್ಲಿ ಸಂಚಲನ ಸೃಷ್ಟಿಸಿರೋ 777 ಚಾರ್ಲಿ ಸಿನಿಮಾ ಈಗಾಗಲೇ ಡಿಜಿಟಲ್ ರೈಟ್ಸ್ ಹಾಗು ಟಿವಿ ರೈಟ್ಸ್ ಸೇರಿದಂತೆ ಬರೋಬ್ಬರಿ 16 ಕೋಟಿಗೆ ಮಾರಾಟ ಆಗಿದೆ ಎನ್ನಲಾಗಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಾಣಾ ದಗ್ಗುಬಾಟಿ, ತಮಿಳು ನಟ ಎಸ್.ಎ ಸೂರ್ಯ ಸೇರಿ ಸ್ಟಾರ್ ನಟರು ಈ ಸಿನಿಮಾ ವಿತರಣೆಯನ್ನು ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಆಪ್ತರು ಹೇಳುವ ಮೂಲಕ ಈಗಾಗಲೇ ಹಾಕಿರುವ ಹಣ ಬಂದಿದೆ. ಬಿಡುಗಡೆಗೆ ಮುನ್ನ 21 ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಹಾಗು ಚಿತ್ರಮಂದಿರದಲ್ಲಿ ರಿಲೀಸ್ ಆದ ಮೇಲೆ ಬರುವ ಕಲೆಕ್ಷನ್ ದೊಡ್ಡ ಮಟ್ಟದ ಲಾಭ ತಂದು ಕೊಡಲಿದೆ ಎನ್ನಲಾಗುತ್ತಿದೆ.
ಪ್ರೀಮಿಯರ್ ಶೋನಿಂದ ಎರಡು ಕೋಟಿ ಹಾಗು ಎಲ್ಲಾ ಭಾಷೆಯಲ್ಲಿ ಬಿಡುಗಡೆ ಆದ ಬಳಿಕ ಫಸ್ಟ್ ಡೇ 15 ರಿಂದ 20 ಕೋಟಿಗೂ ಹೆಚ್ಚು ಕಲೆಕ್ಷನ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಜಿಎಫ್ 2 ಬಳಿಕ 777 ಚಾರ್ಲಿ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಲಿದೆ ಅನ್ನೋದು ಗಾಂಧಿನಗರದ ಸಿನಿಮಾ ಪಂಡಿತರ ಮಾತು.
ಇದನ್ನೂ ಓದಿ: 'ನೈಟ್ ಕರ್ಫ್ಯೂ' ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮಾಲಾಶ್ರೀ ಕಮ್ ಬ್ಯಾಕ್
ಸದ್ಯ ಕನ್ನಡ ಚಿತ್ರವೊಂದು ಮೊದಲ ಬಾರಿಗೆ ಜೂನ್ 2ರಂದು ದೆಹಲಿ ಮತ್ತು ಅಮೃತ್ ಸರದಲ್ಲಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನ ಆಗಲಿದೆ. ಜೂನ್ 3ರಂದು ಲಖನೌ, ಜೂನ್ 6ರಂದು ಚೆನ್ನೈ, ಕೊಚ್ಚಿ, ಜೈಪುರ, ಪುಣೆ, ಮುಂಬೈನಲ್ಲಿ ವಿಶೇಷ ಪ್ರದರ್ಶನ ನಡೆಯಲಿದೆ. ಜೂನ್ 7ಕ್ಕೆ ಹೈದರಾಬಾದ್, ಅಹಮದಾಬಾದ್, ತ್ರಿವೆಂಡ್ರಮ್, ಸೊಲ್ಲಾಪುರ, ವಾರಾಣಸಿ, ಕೊಯಂಬತ್ತೂರ್‌ನಲ್ಲಿ ಚಿತ್ರ ಪ್ರೀಮಿಯರ್ ಶೋ ಆಗಲಿದೆ. ಜೂನ್ 8ರಂದು ವಿಶಾಖಪಟ್ಟಣ, ಮಧುರೈ, ಕೋಲ್ಕತ್ತಾ, ಬರೋಡ ನಾಗ್‌ಪುರ, ಸೂರತ್ ಸೇರಿದಂತೆ 21 ನಗರಗಳಲ್ಲಿ ಪ್ರೀಮಿಯರ್ ಶೋ ಆಗಲಿದೆ. ಇನ್ನು ಜೂನ್ 9ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರೀಮಿಯರ್ ಶೋ ಆಗಲಿದೆ. ಇದರಿಂದ ಸಾಕಷ್ಟು ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ.