ಬಾಯ್ಕಾಟ್ ವಿವಾದಗಳ ನಡುವೆ ಆ.11 ರಂದು ಬಿಡುಗಡೆಯಾದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಆರಂಭಿಕ ಅಂದಾಜಿನ ಪ್ರಕಾರ ಚಿತ್ರವು ಮೊದಲ ದಿನ ಕೇವಲ 10 -11 ಕೋಟಿ ರೂ. ಗಳಿಸಿದೆ. ಇದನ್ನು ವರದಿಯಲ್ಲಿ 'ಶಾಕಿಂಗ್' ಎಂದು ವಿವರಿಸಲಾಗಿದೆ.
ಕಳೆದ 13 ವರ್ಷಗಳಲ್ಲಿ ಅಮೀರ್ ಖಾನ್‌ಗೆ ಇದು ಅತ್ಯಂತ ಕಡಿಮೆ ಓಪನಿಂಗ್ ಎಂದು ಬಾಲಿವುಡ್ ಹಂಗಾಮಾ ಹೇಳಿದೆ. ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಈ ಚಿತ್ರ ಟಾಮ್ ಹ್ಯಾಂಕ್ಸ್ ಅವರ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದೆ. ಅಮೀರ್ ಅವರ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ಹಿಂದಿ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಫ್ಲಾಪ್ ಎಂದು ಪರಿಗಣಿಸಲಾಗಿದೆ. 2018 ರಲ್ಲಿ ಬಿಡುಗಡೆಯಾದ ಈ ಚಿತ್ರ ತನ್ನ ಆರಂಭಿಕ ದಿನದಲ್ಲಿ 52 ಕೋಟಿ ರೂ. ಗಳಿಸಿತು.
ಇನ್ನು ಅಕ್ಷಯ್ ಕುಮಾರ್ ಅವರ 'ರಕ್ಷಾ ಬಂಧನ್' ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಗಳಿಕೆ ಕಂಡಿಲ್ಲ. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರ ಸಹೋದರ ಮತ್ತು ಅವನ ನಾಲ್ಕು ಸಹೋದರಿಯರ ನಡುವಿನ ಸಂಬಂಧವನ್ನು ಕೇಂದ್ರೀಕರಿಸುತ್ತದೆ. ಇದು ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನದಂದು ಕೇವಲ 8 ರಿಂದ 8.50 ಕೋಟಿ ರೂ. ಗಳಿಸಿದೆ.
ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ವಿವಾದಗಳನ್ನು ಎದುರಿಸಿತ್ತು. ಈ ಹಿಂದೆ ಅಮೀರ್ ಮತ್ತು ಕರೀನಾ ನೀಡಿದ ಹೇಳಿಕೆಗಳ ಮೇಲೆ ಚಿತ್ರವನ್ನು ಬಹಿಷ್ಕರಿಸುವ ಕುರಿತು ಟ್ವಿಟರ್ ಟ್ರೆಂಡ್ ಇತ್ತು. ಅಮೀರ್ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ವಿನಂತಿಸಿದ್ದರು.
ಇದನ್ನೂ ಓದಿ: ಲಾಲ್ ಸಿಂಗ್ ಚಡ್ಡಾ ರಿಲೀಸ್: ಆತಂಕದಿಂದ 48 ಗಂಟೆ ನಿದ್ದೆ ಮಾಡಿಲ್ಲವಂತೆ ನಟ ಅಮೀರ್ ಖಾನ್