ಹೈದರಾಬಾದ್: ಸಿನಿಮಾ ರಂಗದ ಅತ್ಯುನ್ನತ್ತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ವೇದಿಕೆ ಸಜ್ಜಾಗುತ್ತಿದೆ. ಈ ಬಾರಿ ಭಾರತದ ಅನೇಕ ಚಿತ್ರಗಳು ಕೂಡ ಆಸ್ಕರ್ ಅಂಗಳದಲ್ಲಿವೆ. ಜಗತ್ತಿನ ಕಣ್ಸಳೆಯುವ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅವಘಡ ನಡೆಯದಂತೆ ಕಾಪಾಡಲು ಹೊಸ ಮಾರ್ಪಾಡುಗಳನ್ನು ಮಾಡಲಾಗಿದೆ. ಈ ಹಿನ್ನೆಲೆ ಈ ಬಾರಿಯ ಸಮಾರಂಭದಲ್ಲಿ ಕ್ರೈಸಿಸ್ ಟೀಮ್ (Crisis Team) ಕೆಲಸ ನಿರ್ವಹಿಸಲಿದೆ. ಈ ತಂಡ ಸೇರಿರುವುದಕ್ಕೆ ಕಾರಣ ಕಳೆದ ವರ್ಷ ಅಂದರೆ, 2022ರಲ್ಲಿ ಆಸ್ಕರ್ ಅಂಗಳದಲ್ಲಿ ನಡೆದ ಅವಘಡ.
ವಿಶ್ವದ ಪ್ರಮುಖ ಸಿನಿ ವೇದಿಕೆಯಲ್ಲಿ ಒಂದಾಗಿರುವ ಆಸ್ಕರ್ನಲ್ಲಿ ಕಳೆದ ವರ್ಷ ನಡೆದ ಅಚಾನಕ್ ಘಟನೆ ಎಲ್ಲರನ್ನು ತಬ್ಬಿಬ್ಬುಗೊಳಿಸಿತ್ತು. ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ಹಾಸ್ಯ ನಟ ಕ್ರಿಸ್ ರಾಕ್ ಅವರಿಗೆ ನಟ ವಿಲ್ ಸ್ಮಿತ್ ವೇದಿಕೆಗೆ ಬಂದು ಕಪಾಳಕ್ಕೆ ಹೊಡೆದಿದ್ದರು. ಈ ಕುರಿತು ಭಾರೀ ಪರ ಮತ್ತು ವಿರೋಧದ ಚರ್ಚೆಗಳು ಹುಟ್ಟಿಕೊಂಡಿದ್ದರ ಜೊತೆಗೆ ಇದು ಆಸ್ಕರ್ಗೆ ಒಂದು ಕಪ್ಪು ಚುಕ್ಕೆಯಾಗಿತ್ತು. ಇಂತಹ ಅನೀರಿಕ್ಷಿತ ಸನ್ನಿವೇಶಗಳನ್ನು ಎದುರಿಸುವ ಸಲುವಾಗಿ ಈ ಬಾರಿ 95ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕ್ರೈಸಿಸ್ ಟೀಮ್ ಅನ್ನು ಸೇರ್ಪಡೆ ಮಾಡಲಾಗುತ್ತಿದೆ.
ಈ ಸಂಬಂಧ ಸಂದರ್ಶನದಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಜನೆತ್ ಯಂಗ್, ತಾವು ನಿರೀಕ್ಷೆ ಮಾಡದ, ಯೋಜಿಸದ ಘಟನೆಗಳು ನಡೆಯುವ ಸಾಧ್ಯತೆಗಳನ್ನು ನಿಭಾಯಿಸುವ ದೃಷ್ಟಿಯಿಂದ ಈ ತಂಡವನ್ನು ನೇಮಿಸಲಾಗಿದೆ. ಈ ಮೊದಲು ಈ ರೀತಿಯ ತಂಡಗಳು ಸಮಾರಂಭದಲ್ಲಿ ಕೆಲಸ ಮಾಡಿರಲಿಲ್ಲ. ಅನಿರೀಕ್ಷಿತ ಸನ್ನಿವೇಶಗಳನ್ನು ಎದುರಿಸುವ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದಿದ್ದಾರೆ.
ಬಿಕ್ಕಟ್ಟಿನ ಯೋಜನೆ, ಬಿಕ್ಕಟ್ಟಿನ ಸಂಪರ್ಕ ತಂಡ ಮತ್ತು ವಿನ್ಯಾಸ ತಂಡ ತುರ್ತು ಸಮಯದಲ್ಲಿ ತಕ್ಷಣಕ್ಕೆ ಒಟ್ಟಾಗಿ ಹೇಳಿಕೆ ನೀಡಲಿದೆ. ಈ ರೀತಿಯ ಯಾವುದೇ ಘಟನೆ ನಡೆಯುವುದಿಲ್ಲ ಎಂಬ ಭರವಸೆ ಇದೆ. ಆದರೂ ಇಂತಹ ಸನ್ನಿವೇಶ ಎದುರಿಸಲು ನಾವು ಸಿದ್ಧರಾಗಿರಬೇಕಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಅಂಡ್ ಸೈನ್ಸ್ ಮುಖ್ಯಸ್ಥ ಕಾರ್ಮರ್ ತಿಳಿಸಿದ್ದಾರೆ.
ಕಳೆದ ವರ್ಷ ನಡೆದ ಘಟನೆ ಮೆಲುಕು: 2022ರಲ್ಲಿ ಅದ್ದೂರಿಯಾಗಿ ಸಾಗಿದ್ದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಡಾಕ್ಯೂಮೆಂಟರಿ ಫೀಚರ್ ಕ್ಯಾಟಗರಿ ಪ್ರಶಸ್ತಿ ನಿರೂಪಣೆಯನ್ನು ಹಾಸ್ಯ ನಟ ಕ್ರಿಸ್ ರಾಕ್ ಮಾಡುತ್ತಿದ್ದರು. ಈ ವೇಳೆ ರಾಕ್, ನಟ ವಿಲ್ ಸ್ಮಿತ್ ಹೆಂಡತಿ ಜೇಡಾ ಪಿನ್ಕೆಟ್ ಸ್ಮಿತ್ ಕುರಿತು ಹಾಸ್ಯ ಮಾಡಿದ್ದರು. ಈ ಹಾಸ್ಯದಿಂದ ಕುಪಿತಗೊಂಡ ನಟ ವಿಲ್ ಸ್ಮಿತ್ ವೇದಿಕೆಗೆ ಬಂದು ರಾಕ್ ಕೆನ್ನೆಗೆ ಬಾರಿಸಿದ್ದರು. ಅಷ್ಟೇ ಅಲ್ಲದೇ, ವೇದಿಕೆಯಿಂದ ಕೆಳಗಿಳಿದ ಬಳಿಕವೂ ರಾಕ್ ವಿರುದ್ಧ ಕಿರುಚಾಡಿದ್ದರು.
ಈ ಘಟನೆ ಬಳಿಕ ಅಕಾಡೆಮಿ ತಕ್ಷಣಕ್ಕೆ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಇದಾದ ಬಳಿಕ ಅದೇ ದಿನ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ ಅಕಾಡೆಮಿ, ಯಾವುದೇ ರೀತಿಯ ಹಿಂಸೆಯನ್ನು ನಾವು ಸಹಿಸುವುದಿಲ್ಲ ಎಂದಿತ್ತು. ಮರುದಿನ ತಮ್ಮ ವರ್ತನೆಗೆ ನಟ ವಿಲ್ಸ್ಮಿತ್ ಕೂಡ ಅಕಾಡೆಮಿ ಎದುರು ಕ್ಷಮೆ ಕೋರಿ, ಕೆಲ ದಿನಗಳ ಬಳಿಕ ಅಕಾಡೆಮಿಗೆ ರಾಜೀನಾಮೆ ನೀಡಿದ್ದರು.
ಇದೀಗ ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಅಕಾಡೆಮಿ ಸಿದ್ಧತೆ ನಡೆಸಿದ್ದು, ಇದೇ ಮಾರ್ಚ್ 12ರಂದು ಪ್ರಶಸ್ತಿ ಸಮಾರಂಭ ಜರುಗಲಿದೆ.
ಇದನ್ನೂ ಓದಿ: 'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಆರ್ಆರ್ಆರ್ ಸ್ಟಾರ್ ರಾಮ್ ಚರಣ್