ಮಂಡ್ಯ: ಲೋಕಸಭಾ ಚುನಾವಣೆ ಮುಗಿದ ನಂತರವೂ ಮೈತ್ರಿ ನಾಯಕರಲ್ಲಿ ಒಗ್ಗಟ್ಟು ಕಂಡುಬರುತ್ತಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಮುಂದೆ ಸರಿ ಪಡಿಸಿಕೊಳ್ಳದೇ ಇದ್ದರೆ ಹೈ ಕಮಾಂಡ್‌ಗೆ ಸಿಎಂ ವಿರುದ್ಧ ದೂರು ನೀಡಲು ರೆಬಲ್ ನಾಯಕ ಚಲುವರಾಯಸ್ವಾಮಿ ನಿರ್ಧರಿಸಿದ್ದಾರೆ.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಅವರು, ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆ. ಹಲವು ಕಡೆ ಪರವಾನಗಿ ಇಲ್ಲದೇ ಇದ್ದರು ಕ್ಲಬ್‌ಗಳು ನಡೆಯುತ್ತಿದ್ದು, ಅವುಗಳ ಮೇಲೆ ದಾಳಿ ಮಾಡದೇ ಪರವಾನಗಿ ಇರುವ ಕ್ಲಬ್‌ಗಳ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಕಾರ್ಯಕರ್ತರೆ ಟಾರ್ಗೆಟ್ ಆಗಿದ್ದಾರೆ ಎಂದು ಸಿಎಂ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.
ಚುನಾವಣೆ ಬಳಿಕ ಬದಲಾವಣೆ ಬಯಸಿದ್ದೆ, ಆದರೆ ಇನ್ನೂ ಬದಲಾವಣೆ ಆಗಿಲ್ಲ. ಮನ್‌ಮುಲ್ ವಿಚಾರದಲ್ಲೂ ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿ ಒಂದು ವರ್ಷ ಚುನಾವಣೆಗೆ ನಿಲ್ಲದಂತೆ ವಜಾಗೊಳಿಸಲಾಗಿದೆ. ಆದರೆ ಜೆಡಿಎಸ್ ಸದಸ್ಯರನ್ನು ಉಳಿಸಿಕೊಳ್ಳಲಾಗಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯ ಎಂದು ಚಲುವರಾಯಸ್ವಾಮಿ ಕಿಡಿಕಾರಿದರು.
ಪುರಸಭೆ ಚುನಾವಣೆ ಬಳಿಕ ವರಿಷ್ಠರನ್ನು ಭೇಟಿಯಾಗಿ ನಮಗೆ ಆಗುತ್ತಿರುವ ತೊಂದರೆಯನ್ನು ವಿವರಿಸಲಾಗುವುದು. ಆ ಮೂಲಕ ಕಾರ್ಯಕರ್ತರ ರಕ್ಷಣೆಗೆ ಮುಂದಾಗಲಾಗುವುದು ಎಂದರು. ಸರ್ಕಾರ ಬೀಳೋದಿಲ್ಲ, ಮಧ್ಯಂತರ ಚುನಾವಣೆಯೂ ಆಗುವುದಿಲ್ಲ ಎಂದು ಮಾಜಿ ಶಾಸಕ ಅಭಿಪ್ರಾಯಪಟ್ಟರು.
ಸುಮಲತಾ ಅಂಬರೀಶ್ ಪರ ಬ್ಯಾಟಿಂಗ್
ಕೆ.ಆರ್. ಎಸ್ ನಿಂದ ನಾಲೆಗಳಿಗೆ ನೀರು ಬಿಡುವ ವಿಚಾರವಾಗಿ ಶಾಸಕ ರವೀಂದ್ರ ನೀಡಿದ್ದ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ ಅವರು, ಸುಮಲತಾ ಅಂಬರೀಶ್ ಗೆದ್ದು ನಾಲ್ಕು ದಿನ ಆಗಿದೆ. ಸದ್ಯ ರಾಜ್ಯದಲ್ಲಿ ರವೀಂದ್ರ ಅವರ ಸರ್ಕಾರ ಇದ್ದು, ಕೆಲಸವನ್ನು ಮಾಡಿಸಿಕೊಳ್ಳಲಿ. ಸುಮಲತಾ ಅಂಬರೀಶ್ ಜನಪರ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಜಿಲ್ಲೆಯಲ್ಲಿ 8 ಜನ ಜೆಡಿಎಸ್ ಶಾಸಕರು ಇದ್ದು, ಅವರ ಕೆಲಸ ಅವರು ಮಾಡ್ಲಿ ಸಾಕು ಎಂದು ಟಾಂಗ್ ನೀಡಿದರು.