ದಾವಣಗೆರೆ: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಎರಡು ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ಗೆ ಬೂಸ್ಟ್ ತುಂಬಿದರು. ಜೊತೆಗೆ ಎರಡು ಲಕ್ಷಕ್ಕೂ ಅಧಿಕ ಮತಗಳಿರುವ ನಾಯಕ ಸಮಾಜದ ಮುಖಂಡನ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡುವ ಮೂಲಕ ನಾಯಕ ಸಮಾಜದ ಮತ ಬೇಟೆ ಶುರುವಿಟ್ಟಿದ್ದಾರೆ ಎನ್ನಲಾಗ್ತಿದೆ.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 16 ಲಕ್ಷಕ್ಕೂ ಅಧಿಕ ಮತಗಳಿದ್ದು, ಅದರಲ್ಲಿ 4 ಲಕ್ಷಕ್ಕೂ ಅಧಿಕ ಲಿಂಗಾಯಿತ ಮತಗಳು, ಉಳಿದ 11 ಲಕ್ಷಕ್ಕೂ ಹೆಚ್ಚು ಮತಗಳು ಅಹಿಂದ ವರ್ಗಗಳದ್ದಾಗಿದೆ. ಈಗಾಗಲೇ ಕುರುಬ, ಮುಸ್ಲಿಂ ಹಾಗೂ ದಲಿತರು ಸೇರಿದಂತೆ ಹಿಂದುಳಿದ ಸಮುದಾಯದ ಮತಗಳು ಕಾಂಗ್ರೆಸ್ಗೆ ಬೀಳಲಿವೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಇನ್ನು ಎರಡು ಲಕ್ಷಕ್ಕೂ ಅಧಿಕ ಮತಗಳಿರುವ ನಾಯಕ ಸಮಾಜದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಈಗಾಗಲೇ ನಾಯಕ ಸಮಾಜ ಹೆಚ್ಚಿರುವ ಜಗಳೂರಿನಲ್ಲಿ ಶಾಸಕ ಶ್ರೀರಾಮುಲು ಅವರನ್ನು ಕರೆಸಿ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ರೋಡ್ ಶೋ ನಡೆಸಿ ನಾಯಕ ಸಮುದಾಯದ ವೋಟುಗಳ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ಕಾಂಗ್ರೆಸ್ ಸಹ ನಾಯಕ ಸಮಾಜದ ಹಿಂದೆ ಬಿದ್ದಿದ್ದು, ಈ ಹಿನ್ನೆಲೆ ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ನಾಯಕ ಸಮಾಜದ ಹಾಸ್ಟೆಲ್ ಅಧ್ಯಕ್ಷ, ಜಿಲ್ಲಾ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಅವರ ಮನೆಗೆ ಸಿದ್ದು ಭೇಟಿ ನೀಡಿದ್ದಾರೆ. ಅಲ್ಲಿ ಸಿದ್ದರಾಮಯ್ಯ ಮಧ್ಯಾಹ್ನ ಊಟ ಮಾಡುವ ಮೂಲಕ ಸಮಾಜದ ಮತಗಳ ಬೇಟೆ ಶುರು ಮಾಡಿದ್ದಾರೆ ಎಂದು ಹೇಳಲಾಗಿದೆ.
ಬಿ.ವೀರಣ್ಣ ಮನೆಯಲ್ಲಿ ರಾಗಿ ಮುದ್ದೆ, ಸೊಪ್ಪಿನ ಸಾರು, ಉದಕ ಸಾರು, ಅನ್ನ, ಮೊಸರು, ಮಜ್ಜಿಗೆ ಸವಿದಿದ್ದಾರೆ. ಜೊತೆಗೆ ಮಾಂಸಾಹಾರವನ್ನು ಸಹ ಮಾಡಲಾಗಿತ್ತು. ಆದರೆ ಚುನಾವಣೆ ಮುಗಿಯುವ ತನಕ ನಾನ್ವೆಜ್ ತಿನ್ನುವುದಿಲ್ಲ ಎಂದ ಸಿದ್ದರಾಮಯ್ಯ ಸಸ್ಯಹಾರ ಸೇವನೆ ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯಗೆ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಟಿ.ಬಿ.ಜಯಚಂದ್ರ, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಸಾಥ್ ನೀಡಿದ್ದಾರೆ.
ಮಗಳ ಮದ್ವೆಗೆ ಬರಬೇಕಿತ್ತು, ಈಗ ಬಂದಿದ್ದಾರೆ
ನನ್ನ ಮಗಳ ಮದ್ವೆಗೆ ಬರಬೇಕಿದ್ದ ಸಿದ್ದರಾಮಯ್ಯನವರು ಕಾರಣಾಂತರಗಳಿಂದ ಬಂದಿರಲಿಲ್ಲ. ಬೇರೆ ಸಮಯದಲ್ಲಿ ಬರುತ್ತೇನೆ ಎಂದು ಹೇಳಿದ್ದರು, ಈಗ ಬಂದಿದ್ದಾರೆ. ಜೊತೆಗೆ ಚುನಾವಣೆ ಇರುವುದರಿಂದ ನಾಯಕ ಸಮಾಜ ಕಾಂಗ್ರೆಸ್ ಪರವಾಗಿರಲಿ ಎಂಬ ಸಂದೇಶ ಸಹ ಕೊಡಲು ಬಂದಿದ್ದಾರೆ ಎಂದು ಊಟದ ಆತಿಥ್ಯ ವಹಿಸಿದ್ದ ಬಿ.ವೀರಣ್ಣ ಹೇಳಿದರು.