ಹಾಸನ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅರಸೀಕೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಿ ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದರು.
ಹಾಸನದ ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಅಪಾರ ಕಾರ್ಯಕರ್ತರುಗಳ ಜೊತೆ ಪ್ರಚಾರ ಆರಂಭಿಸಿದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಮತ್ತೊಮ್ಮೆ ದೇವೇಗೌಡರ ಹೆಸರನ್ನು ಪ್ರಸ್ತಾಪಿಸದೆ ಸಂಸಾರ ರಾಜಕೀಯ ಎನ್ನುವ ಮೂಲಕ ದೇವೇಗೌಡರ ಕುಟುಂಬವನ್ನು ಮಾತಿನ ಮೂಲಕ ಜರಿದರು.
ಒಬ್ಬಂಟಿಯಾಗಿರುವ ಮೋದಿ ದೇಶದ ಹಿತಕ್ಕಾಗಿ ಅವರೊಬ್ಬರೇ ಬಿಜೆಪಿ ಸದಸ್ಯರೇ ತಮ್ಮ ಪರಿವಾರ ಎಂದು ಭಾವಿಸಿ ಚುನಾವಣೆಗೆ ಸ್ಪರ್ಧಿಸಿದರೆ ಮತ್ತೊಬ್ಬರು ತಮ್ಮ ಪರಿವಾರವೇ ಪಕ್ಷದ ಎಂಬಂತೆ ಭಾವಿಸಿ ಚುನಾವಣೆ ಎದುರಿಸುತ್ತಿದ್ದಾರೆ. ನಿಮಗೆ ದೇಶದ ಅಭಿವೃದ್ಧಿ ಮಾಡುವ ನಾಯಕ ಬೇಕಾ ಅಥವಾ ಸಂಸಾರ ಅಭಿವೃದ್ಧಿ ಮಾಡುವ ಜನ ನಾಯಕರು ಬೇಕಾ ಅಂತ ಮಾತಿನ ಮೂಲಕ ಕುಟುಕಿದರು.
ಇನ್ನು ಕಳೆದ ಐದು ವರ್ಷದಲ್ಲಿ ಮೋದಿ ಅವರ ಮೇಲಾಗಲಿ ಅಥವಾ ಕೇಂದ್ರ ಸರ್ಕಾರದ ಮೇಲೆ ಯಾವುದಾದರೂ ಭ್ರಷ್ಟಾಚಾರದ ಆರೋಪ ಇದೆ ಎಂಬುದನ್ನು ರಾಷ್ಟ್ರದ ಜನತೆ ಯೋಚಿಸಬೇಕಾಗುತ್ತದೆ. ಮೋದಿ ಸರ್ಕಾರದ ಹಿಂದೆ ಇದ್ದಂತಹ ಕಾಂಗ್ರೆಸ್ ಮಂತ್ರಿಮಂಡಲದಲ್ಲಿ ಪ್ರತಿನಿತ್ಯ ಭ್ರಷ್ಟಾಚಾರದ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದವು. 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ವೆಲ್ತ್ ಹಗರಣ ಮತ್ತು ಕಲ್ಲಿದ್ದಲು ಹಗರಣಗಳಂತಹ ಬಹು ದೊಡ್ಡ ಹಗರಣಗಳನ್ನು ನಾವು ಕೇಳಿದ್ದೇವೆ.
ಆದರೆ ಸನ್ಯಾಸಿಯಂತಿರುವ ಮೋದಿ ತಮ್ಮ 24 ಗಂಟೆಗಳಲ್ಲಿ 18 ಗಂಟೆಗಳಿಗೂ ಹೆಚ್ಚು ಕಾಲ ಸಮಾಜದ ಒಳಿತಿಗಾಗಿ, ದೇಶವನ್ನು ಅಭಿವೃದ್ಧಿಪಡಿಸುವ ಚಿಂತನೆಯನ್ನು ಮಾಡುವ ಮೂಲಕ ಗಟ್ಟಿತನವನ್ನು ಪ್ರದರ್ಶಿಸುತ್ತಿರುವ ಏಕೈಕ ನಾಯಕ ಅಂದರೆ ಅದು ಮೋದಿ, ನಾನು ಕಳೆದ 60 ವರ್ಷಗಳ ರಾಜಕಾರಣದಲ್ಲಿ ಇಂತಹ ಪ್ರಧಾನಿಯನ್ನ ಎಂದು ನೋಡಿರಲಿಲ್ಲ ಅಂತ ಮಾತಿನ ಮೂಲಕವೇ ಮೋದಿಯನ್ನು ಉತ್ತುಂಗಕ್ಕೆ ಏರಿಸಿದರು.