ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುವುದರಲ್ಲಿ ಬೇರೆ ಮಾತಿಲ್ಲ. ಹೀಗಿರುವಾಗ ಜಿಲ್ಲಾಡಳಿತ ಮಾತ್ರ ಮತದಾನದ ಸಂಖ್ಯೆಯನ್ನು ಹೆಚ್ಚಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ.
ಮತದಾನದ ಅರಿವು ಮೂಡಿಸಲು ದೇಶಾದ್ಯಂತ ಹಲವು ಸ್ಟಾರ್ಗಳು ಸೇರಿದಂತೆ ಜಾಹೀರಾತುಗಳ ಮುಖಾಂತರ ಪ್ರಚಾರ ಮಾಡಲಾಗುತ್ತಿದೆ. ಹಾಗೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೂಡಾ ಮತದಾನವನ್ನು ಹೆಚ್ಚಿಸಲು ಸಾಕಷ್ಟು ಕಸರತ್ತು ನಡೆಯುತ್ತಿದೆ.
ಪೋಸ್ಟ್ ಮೂಖಾಂತರ ಮತದಾನದ ಅರಿವು..
ಚಿಕ್ಕಬಳ್ಳಾಪುರ ನಗರದಾದ್ಯಂತ ಈ ಬಾರಿ ಹೆಚ್ಚಿನ ಮತದಾನವನ್ನು ಮಾಡಿಸಲು ನಿರ್ಧರಿಸಿರುವ ಜಿಲ್ಲಾಡಳಿತ, ಖಾಸಗಿ ಬಸ್ ಸೇರಿದಂತೆ ಟಿಟಿ ವಾಹನಗಳ ಮೇಲೆ ಜಾಹೀರಾತು ನೀಡಿ ಮತಾದಾನದ ಬಗ್ಗೆ ಅರಿವು ಮೂಡಿಸುತ್ತಿದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗೆ ಪತ್ರವನ್ನು ಬರೆಯುವ ಮೂಲಕ ಮತದಾನವನ್ನು ಮಾಡಿ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ.
ಮಾರುಕಟ್ಟೆ, ಅಂಚೆ, ರಂಗೋಲಿ ಮೂಲಕ ಅರಿವು..
ಇನ್ನು ರೈತರು ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ ನಂತರ ನೀಡುವ ಬಿಲ್ಗಳಲ್ಲಿ ಮತ ಚಲಾವಣೆ ನಮ್ಮ ಹಕ್ಕು. ಲೋಕಸಭಾ ಚುನಾವಣೆಯಲ್ಲಿ ಮತವನ್ನು ಚಲಾಯಿಸಿ ಎಂದು ಬರೆದಿದ್ದಾರೆ. ಅದೇ ರೀತಿ ಸ್ವೀಪ್ ಸಮೀತಿ ಜಿಲ್ಲೆಯ ಹಲವೆಡೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ಮತದಾನದ ಅರಿವು ಮೂಡಿಸಿ ಭಾಗವಹಿಸಿದ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ವಿಕಲಚೇತನರಿಂದ ಮತದಾನದ ಜಾಗೃತಿ..
ಜಿಲ್ಲೆಯ ವಿಕಲಚೇತನರು ತಮ್ಮ ದ್ವಿಚಕ್ರ ವಾಹನಗಳ ಮುಖಾಂತರ ಜಾಥಾ ಏರ್ಪಡಿಸಿದ್ದು ಮತದಾನವನ್ನು ಮಾಡುವಂತೆ ಅರಿವು ಮೂಡಿಸುತ್ತಿದ್ದಾರೆ. ಅದೇ ರೀತಿ ಮತದಾನದ ಸಂದರ್ಭದಲ್ಲಿ ಯಾರದರು ವಿಕಲಚೇತನರು ಮತವನ್ನು ಚಲಾಯಿಸಬೇಕಾದರೆ ವ್ಹೀಲ್ ಚೇರ್ಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ 76.06% ರಷ್ಟು ಮತದಾನವಾಗಿದ್ದು, ಈ ಬಾರಿ ಇನ್ನೂ ಹೆಚ್ಚಿನ ಮತದಾನವನ್ನು ಮೂಡಿಸಲು ಜಿಲ್ಲಾಡಳಿತ ಸಾಕಷ್ಟು ಕಸರತ್ತು ಮಾಡುತ್ತಿದೆ.