ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡದೇ ಬಿಜೆಪಿ ಮೋಸ ಮಾಡಿದೆ. ರಾಜ್ಯದಲ್ಲಿ ಯಾವೊಬ್ಬ ನಾಯಕರಿಗೂ ಟಿಕೆಟ್ ನೀಡದಿರುವುದು ಬೇಸರ ತಂದಿದೆ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಿಂದುಳಿದ ಸಮಾಜದವರಿಗೆ ಬೆಂಬಲ ನೀಡಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ರಾಮಚಂದ್ರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟ ಏಳು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರನ್ನು ಕಣಕ್ಕಿಳಿಸಿದೆ. ಆದ್ರೆ ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿ ನೀತಿ ಅನುಸರಿಸುತ್ತಿದ್ದು, ಜನರು ಈ ಪಕ್ಷ ತಿರಸ್ಕರಿಸಬೇಕು. ಹಿಂದುಳಿದ ಜಾತಿಗಳ ಅಭ್ಯರ್ಥಿಗಳ ಗೆಲುವಿಗೆ ಒಕ್ಕೂಟ ಸ್ವಯಂಪ್ರೇರಿತವಾಗಿ ಶ್ರಮಿಸಲಿದೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುರುಬ ಸಮುದಾಯದ ಮುಖಂಡ ಹೆಚ್.ಬಿ.ಮಂಜಪ್ಪರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ 27 ವರ್ಷಗಳ ಬಳಿಕ ಹಿಂದುಳಿದ ವರ್ಗದವರಿಗೆ ಇಲ್ಲಿ ಟಿಕೆಟ್ ಸಿಕ್ಕಿದೆ. ಈಗಾಗಲೇ ಒಕ್ಕೂಟವು ಜಿಲ್ಲೆಯ ವಿವಿಧೆಡೆ ಪ್ರಚಾರ ನಡೆಸಿದ್ದು, ಮಂಜಪ್ಪ ಪರವಾಗಿ ಜನರೇ ಪ್ರಚಾರ ನಡೆಸುತ್ತಿದ್ದಾರೆ. ಒಕ್ಕೂಟವು ಬಿಜೆಪಿ ನಮಗೆ ಮಾಡಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.