ಬೆಂಗಳೂರು : ಡಿಸಿಎಂ ಡಾ. ಜಿ. ಪರಮೇಶ್ವರ್ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿರುವ ಸಚಿವರ ಸಭೆಗೆ ಬಹುತೇಕ ಎಲ್ಲ ಹಿರಿಯ ನಾಯಕರು ಮತ್ತು ಸಚಿವರು ಆಗಮಿಸಿದ್ದು ಸಮಾಲೋಚನೆ ನಡೆಸಿದ್ದಾರೆ.
ಸದಾಶಿವನಗರದ ಪರಮೇಶ್ವರ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಚಿವರ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮಾಲೋಚನೆ ನಡೆಸಿದ್ದಾರೆ.
ಸಚಿವರಾದ ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಶಿವಾನಂದ ಪಾಟೀಲ್, ಪುಟ್ಟರಂಗಶೆಟ್ಟಿ ಹೊರತು ಪಡಿಸಿ ಉಳಿದೆಲ್ಲಾ ಸಚಿವರು ಆಗಮಿಸಿದ್ದಾರೆ. ಬರದವರು ಕೂಡ ಕಾರಣ ನೀಡಿದ್ದಾರೆ. ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದೋ ಅಥವಾ ಪುನರ್ ರಚನೆ ಮಾಡುವುದೋ ಎನ್ನುವ ಚರ್ಚೆ ನಡೆದಿದ್ದು, ಅದರಲ್ಲಿ ಹೆಚ್ಚಿನವರು ಪುನರ್ ರಚನೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರವನ್ನು ಸುಭದ್ರವಾಗಿಸಿಕೊಳ್ಳಲು ವಿಸ್ತರಣೆಗಿಂತ ಪುನರ್ ರಚನೆ ಉತ್ತಮ ಎಂಬ ಅಭಿಪ್ರಾಯ ಕೇಳಿಬಂತು. 7-8 ಜನ ಶಾಸಕರು ಅಸಮಾಧಾನಗೊಂಡಿದ್ದಾರೆ. ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಒಂದು ಸಚಿವ ಸ್ಥಾನ ಮಾತ್ರ ಖಾಲಿ ಇದೆ. ಜೆಡಿಎಸ್ ತನ್ನ ಪಾಲಿನ ಎರಡು ಸ್ಥಾನ ಕಾಂಗ್ರೆಸ್ ಗೆ ಬಿಟ್ಟು ಕೊಡುವುದು ಅನುಮಾನ .
ಈ ಹಿನ್ನೆಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೂ ಕೂಡ ಕೆಲ ಸಚಿವರನ್ನು ಕೈಬಿಡಲು ನಿರ್ಧರಿಸಲಾಗಿದೆ. ಈ ಸಂಬಂಧ ಅಂಥವರಿಗೆ ಮಾನಸಿಕವಾಗಿ ಸಿದ್ಧವಾಗುವಂತೆ ಸೂಚಿಸಲಾಗಿದೆ. ಸಚಿವರಾದ ವೆಂಕಟರಮಣಪ್ಪ, ಡಾ. ಜಯಮಾಲಾ, ಪುಟ್ಟರಂಗ ಶೆಟ್ಟಿ, ಪ್ರಿಯಂಕ ಖರ್ಗೆ, ಯು.ಟಿ. ಖಾದರ್, ಆರ್. ಬಿ. ತಿಮ್ಮಾಪೂರ್ ಮತ್ತಿತರರಿಗೆ ಈ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಇದಲ್ಲದೇ ಕೃಷ್ಣ ಬೈರೇಗೌಡ, ಆರ್ ವಿ ದೇಶಪಾಂಡೆ, ಯು.ಟಿ. ಖಾದರ್, ಎಂ.ಬಿ. ಪಾಟೀಲ್ ಅವರನ್ನೂ ಕೈಬಿಟ್ಟರೂ ಅಚ್ಚರಿ ಇಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.