ಬೆಂಗಳೂರು: ಸರ್ಕಾರದ ಪರ ವಕೀಲರು ನೀಡಿದ ಸಾಕ್ಷಿಗಳು ಬಲವಾಗಿಲ್ಲ ಎಂಬ ಕಾರಣ ನೀಡಿದ ಹೈಕೋರ್ಟ್, ತನ್ನ ಎರಡು ತಿಂಗಳ ಮಗುವಿನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಮಹಿಳೆಯನ್ನು ಆರೋಪಮುಕ್ತಗೊಳಿಸಿದೆ. ಆಗಸ್ಟ್ 2016ರಲ್ಲಿ ಮಹಿಳೆಯೋರ್ವಳು ತನ್ನ ಎರಡು ತಿಂಗಳ ಮಗುವನ್ನು ಕೊರಟಗೆರೆ ಪಟ್ಟಣದ ಹೊರವಲಯದ ನದಿಗೆ ಎಸೆದು ಕೊಲೆ ಮಾಡಿದ್ದಳು ಎಂಬ ಪ್ರಕರಣ ಇದಾಗಿದೆ.
ಸರ್ಕಾರಿ ವಕೀಲರ ವಾದದ ಪ್ರಕಾರ, ಆಂಧ್ರ ಪ್ರದೇಶ ಅನಂತಪುರ ಜಿಲ್ಲೆ ಮಡಕಶಿರಾ ತಾಲೂಕಿನ ನಿವಾಸಿ ಕವಿತಾ ಎಂಬಾಕೆ ಆಗಸ್ಟ್ 24, 2016 ರಂದು ತನ್ನ ಗಂಡ ಮಂಜುನಾಥನೊಂದಿಗೆ ಕೊರಟಗೆರೆ ಪಟ್ಟಣದ ರೇಣುಕಾ ಆಸ್ಪತ್ರೆಗೆ ಬಂದಿದ್ದಳು. ಉಸಿರಾಟದ ಸಮಸ್ಯೆ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ ತಮ್ಮ ಶಿಶುವಿಗೆ ಚಿಕಿತ್ಸೆ ಕೊಡಿಸಲು ಅಲ್ಲಿಗೆ ಬಂದಿದ್ದರು. ಮಗುವಿಗೆ ಕುಡಿಸಲು ತನಗೆ ಸಾಕಷ್ಟು ಹಾಲು ಬರುತ್ತಿಲ್ಲವೆಂದು ಅಸಮಾಧಾನಗೊಂಡ ಕವಿತಾ ಅದೇ ದಿನ ಸಂಜೆ 4 ಗಂಟೆಗೆ ಮಗುವನ್ನು ಸುವರ್ಣಮುಖಿ ನದಿಗೆ ಎಸೆದಳು ಎಂದು ಹೇಳಲಾಗಿತ್ತು.
ಜುಲೈ 22, 2017 ರಂದು ತುಮಕೂರಿನ ನ್ಯಾಯಾಲಯವು ಕವಿತಾಳನ್ನು ಕೊಲೆ ಅಪರಾಧಿ ಎಂದು ತೀರ್ಮಾನಿಸಿ ಆಕೆಗೆ 10 ಸಾವಿರ ರೂಪಾಯಿ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದಳು.
ಕೋರ್ಟ್ ಮುಂದೆ ಇಡಲಾಗಿದ್ದ ಎಲ್ಲ ಸಾಕ್ಷಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ, ನೀಡಲಾದ ಸಾಕ್ಷಿಗಳ ದೃಢೀಕರಣ ಮುಖ್ಯ. ಆರೋಪಿಯು ಕೊಲೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಕ್ಷಿಗಳು ಸಕಾರಾತ್ಮಕ, ಸ್ಪಷ್ಟ, ಸ್ಥಿರ ಮತ್ತು ಸಂಭವನೀಯವಾಗಿರಬೇಕು ಎಂದು ತಿಳಿಸಿತ್ತು.
ಪ್ರಕರಣದಲ್ಲಿ ದೂರುದಾರನಾಗಿದ್ದ ಕವಿತಾಳ ಗಂಡ ಮಂಜುನಾಥ ಪರಾರಿ ಸಾಕ್ಷಿಯಾಗಿದ್ದು, ಅಧೀನ ನ್ಯಾಯಾಲಯವು ಮಗುವಿಗೆ ಚಿಕಿತ್ಸೆ ನೀಡಿದ ಡಾ. ಮಲ್ಲಿಕಾರ್ಜುನಯ್ಯ ಹಾಗೂ ಮಗುವಿನ ಶವ ಪರೀಕ್ಷೆ ನಡೆಸಿದ ಡಾ. ರುದ್ರಮೂರ್ತಿ ಅವರ ಹೇಳಿಕೆಗಳ ಮೇಲೆ ನಿರ್ಧಾರ ಕೈಗೊಂಡಿದ್ದನ್ನು ಪ್ರಮುಖವಾಗಿ ನ್ಯಾಯಪೀಠ ಪರಿಗಣಿಸಿತು.
ಸರ್ಕಾರದ ಪರ ವಕೀಲರು 15 ಸಾಕ್ಷಿಗಳನ್ನು ಹಾಜರುಪಡಿಸಿದರೂ ಇದರಲ್ಲಿ ಒಂದೂ ಸಾಕ್ಷಿ ಬಲವಾಗಿಲ್ಲ ಎಂದು ಹೇಳಿದ ಹೈಕೋರ್ಟ್ ಕವಿತಾಳನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿ ತೀರ್ಪು ನೀಡಿದೆ.