ಕಾಸ್‌ಗಂಜ್ (ಉತ್ತರಪ್ರದೇಶ): ತನ್ನ ಮೂರು ತಿಂಗಳ ಮಗುವನ್ನು 5 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ಭಾನುವಾರ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಆರೋಪಿ ತನ್ನ ಮಗನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ನಕಲಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮಗುವನ್ನು ರಕ್ಷಿಸಿ ತಾಯಿಗೆ ಒಪ್ಪಿಸಿದ್ದಾರೆ. ಜಿಲ್ಲೆಯ ಸೊರೊನ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಮ್ರೌವಾದಲ್ಲಿ ಈ ಘಟನೆ ನಡೆದಿದೆ.
ಶನಿವಾರ ರಾತ್ರಿ ಆರೋಪಿ ರವೀಂದ್ರನ ಮೂರು ತಿಂಗಳ ಮಗು ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆ ಆಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಭಾನುವಾರ ರವೀಂದ್ರ ಎಂಬಾತನೇ ತನ್ನ ಮಗುವನ್ನು 5 ಲಕ್ಷ ರೂ.ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಮಗುವಿನ ಚಿಕ್ಕಮ್ಮ ಮಣಿ ಮತ್ತು ಬದನ್ ಸಿಂಗ್ ಎಂಬ ಇನ್ನೊಬ್ಬ ವ್ಯಕ್ತಿಯ ಹೆಸರು ಕೂಡ ತನಿಖೆಯ ಸಮಯದಲ್ಲಿ ಅಪಹರಣ ಮಾಡಿ ಮಾರಾಟಕ್ಕೆ ಸಹಾಯ ಮಾಡಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.
5 ಲಕ್ಷ ರೂಗೆ ಮಾರಾಟ ಮಾಡುವ ಉದ್ದೇಶದಿಂದ ರವೀಂದ್ರ ಎಂಬಾತನೇ ತನ್ನ ಮಗನನ್ನು ಮನೆಯಿಂದ ಕರೆತಂದು ಆಕೆಗೆ ಒಪ್ಪಿಸಿದ್ದ ಎಂದು ಮಣಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮಣಿ ತನ್ನ ಪರಿಚಯಸ್ಥ ಓಂಪಾಲ್ ಸಹಾಯದಿಂದ ಮಗುವನ್ನು ಬದನ್ ಸಿಂಗ್ ಎಂಬ ವ್ಯಕ್ತಿಗೆ ಕೊಟ್ಟಿದ್ದರು ಆದರೆ ಪೊಲೀಸರು ಮಗುವನ್ನು ರಕ್ಷಿಸಿ ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗುವಿನ ತಂದೆ ಮತ್ತು ಚಿಕ್ಕಮ್ಮ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇತರರ ಶಾಮೀಲಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಾಸಗಂಜ್ ಎಸ್ಪಿ ಬಿಬಿಜಿಟಿಎಸ್ ಮೂರ್ತಿ ತಿಳಿಸಿದ್ದಾರೆ.
ಇದನ್ನು ಓದಿ: ಮದುವೆ ಭರವಸೆ.. ಯುವತಿಗೆ ನಂಬಿಸಿ ತಂದೆ ಮಗನಿಂದ ಅತ್ಯಾಚಾರ