ಮುಂಬೈ: ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಿಳಿಸಿದೆ.
ನಿನ್ನೆಯಷ್ಟೇ ಹಿರೇನ್ ಡೆತ್ ಕೇಸ್ನ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ಹಸ್ತಾಂತರ ಮಾಡಲಾಗಿತ್ತು. ಇದೀಗ ಅಮಾನತುಗೊಂಡಿದ್ದ ಪೊಲೀಸ್ ಕಾನ್‌ಸ್ಟೇಬಲ್ ವಿನಾಯಕ್ ಶಿಂಧೆ ಹಾಗೂ ಬುಕ್ಕಿ ನರೇಶ್ ಧಾರೆಯನ್ನು ಎಟಿಎಸ್ ಬಂಧಿಸಿದೆ.
ಪ್ರಕರಣ ಹಿನ್ನೆಲೆ
ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ಇರಿಸಿದ್ದ ಸ್ಕಾರ್ಪಿಯೋ ಕಾರು ಪತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆ ಕಾರು ಶಂಕಿತ ಆರೋಪಿ ಮನ್ಸುಖ್ ಹಿರೇನ್ ಅವರದ್ದಲ್ಲ ಎಂಬ ಸತ್ಯ ತಿಳಿಯುವ ಮುನ್ನವೇ ಥಾಣೆಯ ನದಿಯೊಂದರಲ್ಲಿ ಹಿರೇನ್ ಶವವಾಗಿ ಪತ್ತೆಯಾಗಿದ್ದರು. ಮನ್ಸುಖ್ರ ನಿಗೂಢ ಸಾವಿನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.