ನವದೆಹಲಿ: ಅತೀ ಹೆಚ್ಚು ಬೆಲೆಗೆ ನಕಲಿ ರೆಮ್ಡಿಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದು, 10 ನಕಲಿ ಬಾಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕ್ರಾಸ್ ರಿವರ್ ಮಾಲ್‌ಗೆ ಹೋಂಡಾ ಸಿಟಿ ಕಾರಿನಲ್ಲಿ ಆರೋಪಿಗಳು ಬರುತ್ತಾರೆಂಬ ನಿಖರ ಮಾಹಿತಿಯ ಮೇರೆಗೆ ದೆಹಲಿ ಪೊಲೀಸರ ಆ್ಯಂಟಿ ಆಟೋ ಥೆಫ್ಟ್ ಸ್ಕ್ವಾಡ್ (ಎಎಟಿಎಸ್) ನಿನ್ನೆ ರಾತ್ರಿ ದಾಳಿ ನಡೆಸಿತ್ತು. ಕಾರು ಅಡ್ಡಗಟ್ಟಿ ತಪಾಸಣೆಗೆ ಮುಂದಾದಾಗ ಕಾರಿನಲ್ಲಿದ್ದ ಓರ್ವ ಕೈಯಲ್ಲಿ ಪಾಲಿಥೀನ್ ಚೀಲವನ್ನು ಹಿಡಿದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಪೊಲೀಸರು ಆತನನ್ನು ಹಿಡಿದು ಪರಿಶೀಲಿಸಿದಾಗ, 10 ನಕಲಿ ರೆಮ್ಡಿಸಿವಿರ್ ಚುಚ್ಚುಮದ್ದುಗಳು ಕಂಡುಬಂದಿವೆ.
ಇದನ್ನೂ ಓದಿ: 1 ರೆಮ್ಡಿಸಿವಿರ್ ಇಂಜೆಕ್ಷನ್‌ಗೆ 25 ಸಾವಿರ ರೂ: ನಕಲಿ ಚುಚ್ಚುಮದ್ದು ಕಾರ್ಖಾನೆ ಮೇಲೆ ದಾಳಿ
ಚುಚ್ಚುಮದ್ದಿನ ಮೇಲೆ 5,400 ರೂ. ಎಂಆರ್ಪಿ ದರ ಇದ್ದು, ಆರೋಪಿಗಳು ಒಂದು ರೆಮ್ಡಿಸಿವಿರ್ಅನ್ನು 35,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.