ನವದೆಹಲಿ: ರಾಷ್ಟ್ರೀಯ ರಾಜಧಾನಿಯಲ್ಲಿ ಕಾರ್ಯಾಚರಣೆ ಮುಂದುವರೆಸಿರುವ ವಿಶೇಷ ಪೊಲೀಸ್ ಪಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಪಾಕ್ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಯ್ ಬರೇಲಿಯ ನಿವಾಸಿ ಜಮೀನ್, ಪ್ರಯಾಗರಾಜ್ ನಿವಾಸಿ ಇಮ್ತಿಯಾಜ್ ಹಾಗೂ ಮೊಹಮ್ಮದ್ ತಾಹಿರ್ ಅಲಿಯಾಸ್ ಮದನಿ ಬಂಧಿತರು.
ಪ್ರಸ್ತುತ ಮೂವರನ್ನು ದೆಹಲಿಗೆ ಕರೆತಂದು ಕೃತ್ಯಕ್ಕೆ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರ ವಿಶೇಷ ಸೆಲ್ ನಿನ್ನೆ ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಆರು ಉಗ್ರರನ್ನು ಬಂಧಿಸಿತ್ತು.
ನಿನ್ನೆ ಬಂಧಿಸಲಾಗಿದ್ದ 6 ಮಂದಿಯ ಪೈಕಿ ಇಬ್ಬರು ಉಗ್ರರು 15 ದಿನಗಳ ತರಬೇತಿಗಾಗಿ ಪಾಕಿಸ್ತಾನಕ್ಕೆ ಹೋಗಿದ್ದರು. ಇವರೆಲ್ಲಾ ಮುಂಬರುವ ಹಬ್ಬದ ಸಮಯದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ. ಬಂಧಿತ ಉಗ್ರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು 14 ದಿನಗಳ ಅವಧಿಗೆ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಇದನ್ನೂ ಓದಿ: ದೇಶದ ವಿವಿಧೆಡೆ ಬಾಂಬ್ ಸ್ಫೋಟಕ್ಕೆ ಸ್ಕೆಚ್: ಪಾಕ್‌ನಲ್ಲಿ ತರಬೇತಿ ಪಡೆದ ಇಬ್ಬರು ಉಗ್ರರು ಸೇರಿ 6 ಜನರ ಬಂಧನ