ಬೆಂಗಳೂರು: ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ಸಮೀಪದ ಮಂಜುನಾಥ ನಗರದ ನಿವಾಸಿ ಪ್ರಶಾಂತ್ (21) ಬಂಧಿತ ಆರೋಪಿಯಾಗಿದ್ದು, ಆರೋಪಿ ನೀಡಿದ ಮಾಹಿತಿ ಮೇರೆಗೆ 12 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 16.85 ಲಕ್ಷ ರೂ. ಮೌಲ್ಯದ 317 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಮಾಗಡಿ ರಸ್ತೆ ನಿವಾಸಿ ಗೀತಾ ಜಿ. ನಾರಂಗ್ 2020 ಡಿಸೆಂಬರ್ 29ರಂದು ಬೆಳಗ್ಗೆ 6.15 ಗಂಟೆಗೆ ಕೆಲಸಕ್ಕೆ ಹೋಗುವಾಗ ಅವಸರದಲ್ಲಿ ಮನೆಯ ಬೀಗವನ್ನು ಹಾಕದೆ ಮರೆತು ಹೋಗಿದ್ದರು.
ಬಳಿಕ ಮದ್ಯಾಹ್ನ 1.30ಕ್ಕೆ ವಾಪಸ್ ಬಂದು ನೋಡಿದಾಗ ಮನೆಯ ಬೀರುವಿನಲ್ಲಿಟ್ಟಿದ್ದ 17 ಗ್ರಾಂ ಚಿನ್ನಾಭರಣ ಹಾಗೂ 15 ಸಾವಿರ ರೂ. ನಗದು ಹಣವನ್ನು ದುಷ್ಕರ್ಮಿಗಳು ದೋಚಿದ್ದರು. ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಒಟ್ಟು 15 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.