ನಯಾಗಢ, ಒಡಿಶಾ: ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ಕೆಲವೊಂದು ಪ್ರದೇಶಗಳಲ್ಲಿ ಮೂಢ ನಂಬಿಕೆ ಇನ್ನೂ ಜೀವಂತವಾಗಿದೆ. ಒಡಿಶಾದಲ್ಲಿ ನಡೆದಿರುವ ಸನ್ನಿವೇಶವೊಂದು ಇದಕ್ಕೆ ಸಾಕ್ಷಿಯಾಗಿದೆ.
ಹೌದು, ಒಡಿಶಾದ ನಯಾಗಢ ಜಿಲ್ಲೆಯಲ್ಲಿ ಮೃತ ವ್ಯಕ್ತಿಯನ್ನು ಬದುಕಿಸಲು ಕ್ಷುದ್ರಪೂಜೆ ನಡೆಸಲಾಗಿದೆ. ಓರ್ವ ವ್ಯಕ್ತಿ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದು, ಆತನನ್ನು ಬದುಕಿಸಲು ಸ್ಥಳೀಯರು ಮತ್ತು ಕೆಲವು ಪೂಜಾರಿಗಳು ಇದೇ ತಿಂಗಳ ಮೂರನೇ ತಾರೀಖು (ಶನಿವಾರ) ಪೂಜೆ ನಡೆಸಿದ್ದಾರೆ.
ಬಾರ್ಸಾಹಿ ಗ್ರಾಮಕ್ಕೆ ಸೇರಿದ್ದ ಓರ್ವ ವ್ಯಕ್ತಿ ಅನಾರೋಗ್ಯಕ್ಕೆ ಗುರಿಯಾಗಿದ್ದು, ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದು, ವೈದ್ಯರು ಶವ ಪರೀಕ್ಷೆ ಮಾಡಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: ಚೀನಾದೊಡನೆ ಸೇನಾ ಮೈತ್ರಿ ಒಪ್ಪಂದ ಇಲ್ಲ ಎಂದ ರಷ್ಯಾ: ಭಾರತದ ಸ್ನೇಹ ಮತ್ತಷ್ಟು ಬಲಿಷ್ಠ
ಕುಟುಂಬಸ್ಥರು ಮೃತದೇಹದ ಅಂತ್ಯಕ್ರಿಯೆ ನಡೆಸುವ ಬದಲಾಗಿ ಯಾವುದೇ ರೀತಿಯಲ್ಲದರೂ ಆತನನ್ನು ಬದುಕಿಸಬೇಕೆಂದು ಸ್ಥಳೀಯ ತಾಂತ್ರಿಕರ ಸಹಾಯದಿಂದ ವಿವಿಧ ಪೂಜೆಗಳನ್ನು ನೆರವೇರಿಸಿದ್ದಾರೆ. ಈ ವೇಳೆ ಗ್ರಾಮಸ್ಥರೆಲ್ಲಾ ನೆರೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇಷ್ಟೆಲ್ಲಾ ಪ್ರಯತ್ನಗಳ ಬಳಿಕ ಮೃತದೇಹಕ್ಕೆ ಜೀವ ಕೊಡಲಾಗದ ಕಾರಣ ಸೋಮವಾರ ಬೆಳಗ್ಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.