ಗೋರಖಪುರ(ಉತ್ತರಪ್ರದೇಶ): ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ನಿರ್ಲಕ್ಷ್ಯ ಮತ್ತೊಮ್ಮೆ ಬಯಲಾಗಿದೆ. ಅಪಘಾತದಲ್ಲಿ ಮೃತಪಟ್ಟಿದ್ದ ಯುವಕನ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಆದರೆ ಶವಾಗಾರದಲ್ಲಿ ಇರಿಸಲಾಗಿದ್ದ ಯುವಕನ ಮುಖ, ಮೂಗನ್ನು ಇಲಿಗಳು ತಿಂದು ಹಾಕಿವೆ.
ಶವಾಗಾರದಲ್ಲಿ ಇಲಿಗಳ ಕಾಟ ಹೆಚ್ಚಾಗಿರುವುದು ಹಾಗೂ ಮೃತದೇಹಗಳನ್ನು ಹೀಗೆ ಇಲಿಗಳು ತಿಂದು ಹಾಕುತ್ತಿರುವುದನ್ನು ನೋಡಿದರೆ ಇಲ್ಲಿನ ಜಿಲ್ಲಾ ಆಸ್ಪತ್ರೆ ವ್ಯವಸ್ಥೆ ಹೇಗಿರಬಹುದು ಎಂಬುದನ್ನು ನೀವೆ ಒಮ್ಮೆ ಯೋಚಿಸಿನೋಡಿ.
ಮೃತ ಯುವಕನ ಮುಖ ಮೂತಿಯನ್ನು ಹೀಗೆ ಇಲಿಗಳು ತಿಂದು ಹಾಕಿರುವುದನ್ನು ಕಂಡು ಇಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಶವಾಗಾರದಲ್ಲೇ ಇಂತಹ ಸ್ಥಿತಿ ಇರಬೇಕಾದರೆ, ಆಸ್ಪತ್ರೆಯಲ್ಲಿ ಎಂತಹಾ ಸ್ಥಿತಿ ಇರಬಹುದು ಎಂದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಇಲ್ಲಿನ ಶವಾಗಾರದಲ್ಲಿ ಇಲಿಗಳು ಮೃತದೇಹಗಳನ್ನು ತಿನ್ನುತ್ತಿರುವುದು ಇದೇ ಮೊದಲೇನಲ್ಲ ಬಿಡಿ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆಯಂತೆ.
ನಡೆದ ಘಟನೆಯಾದರೂ ಏನು?: ಖೋರಾಬರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಗದೀಶ್‌ಪುರ ಫೋರ್‌ಲೇನ್‌ನಲ್ಲಿ ಪಿಕಪ್ ವಾಹನ ಪಲ್ಟಿಯಾಗಿದೆ. ಈ ವೇಳೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಸುಮಿತ್ ಗೌರ್ (21 ವರ್ಷ) ಮತ್ತು ಮೆಹಬೂಬ್ ಸಿದ್ದಿಕಿ (20 ವರ್ಷ) ಈ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಪರಿಣಾಮ ಇವರ ಮೃತದೇಹಗಳನ್ನು ಪೋಸ್ಟ್ ಮಾರ್ಟ್ಂಗಾಗಿ ಶವಾಗಾರಕ್ಕೆ ರವಾನಿಸಲಾಗಿತ್ತು.
ಪೋಸ್ಟ್ ಮಾರ್ಟಂಗಾಗಿ ಶವಾಗಾರದಲ್ಲಿ ಇರಿಸಲಾಗಿದ್ದ ಸುಮಿತ್ ಅವರ ಮುಖ ಹಾಗೂ ಮೂಗನ್ನು ಇಲಿಗಳು ರಾತ್ರಿ ವೇಳೆ ಕಚ್ಚಿ ಹಾಕಿವೆ. ಬೆಳಗ್ಗೆ ಸಂಬಂಧಿಕರು ಮೃತದೇಹಗಳನ್ನು ಪಡೆಯಲು ಬಂದಾಗ ಓರ್ವ ಮೃತದೇಹದ ಮುಖ ಮತ್ತು ಮೂಗನ್ನು ಇಲಿಗಳು ಕಚ್ಚಿರುವುದು ಕಂಡುಬಂದಿದೆ. ಇದನ್ನು ಕಂಡು ಮೃತರ ಸಂಬಂಧಿಕರು ಆಸ್ಪತ್ರೆ ವ್ಯವಸ್ಥೆ ಬಗ್ಗೆ ಹರಿಹಾಯ್ದಿದ್ದಾರೆ.
ಈ ಬಗ್ಗೆ ದೂರು ನೀಡಲು ಸಿಎಂಒಗೆ ಹೋಗಿದ್ದಾರೆ. ಆದರೆ ಭೇಟಿಯಾಗಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಮಾತನಾಡಿದ ಸಿಎಂಒ ಅಶುತೋಷ್ ದುಬೆ, ಇಬ್ಬರು ಯುವಕರ ಶವಗಳನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಇನ್ನು ಮೃತ ದೇಹವನ್ನು ಇಲಿಗಳು ತಿಂದು ಹಾಕಿವೆ ಎಂದು ಅವರ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.
ವಿಚಾರಣೆಗೆ ಆದೇಶ: ಸಂಬಂಧಿಕರ ಆರೋಪದ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಎಂಒ ಡಾ.ಎ.ಕೆ.ಚೌಧರಿ ಮತ್ತು ಡಾ.ನಂದಕುಮಾರ್ ನೇತೃತ್ವದಲ್ಲಿ ವಿಚಾರಣಾ ಸಮಿತಿ ರಚಿಸಲಾಗಿದೆ ಎಂದು ಇದೇ ವೇಳೆ ದುಬೆ ಸ್ಪಷ್ಟನೆ ನೀಡಿದರು. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಹೇಳಿದರು.
ಇದನ್ನು ಓದಿ:ಲಿಫ್ಟ್ ನೆಪದಲ್ಲಿ ಬೈಕ್ ಸವಾರನಿಗೆ ವಿಷದ ಇಂಜೆಕ್ಷನ್ ಚುಚ್ಚಿದ ಆರ್ಎಂಪಿ ವೈದ್ಯ: ಪತ್ನಿ ಫೋನ್ ಕಾಲ್ನಲ್ಲಿತ್ತು ಕೊಲೆ ರಹಸ್ಯ!