ಬೆಂಗಳೂರು: ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ನುಗ್ಗಿ ರೋಗಿಗಳ ಮೈಮೇಲಿದ್ದ ಚಿನ್ನಾಭರಣ ದೋಚುತ್ತಿದ್ದ ಕಳ್ಳಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ. ಮಹಿಳೆಯನ್ನು ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲೈಫ್ ಸ್ಟೈಲ್ ಬಳಿ ಇರುವ ಪ್ರತಿಷ್ಠಿತ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ರಮೇಶ್ ಎಂಬುವರು ತನ್ನ ತಾಯಿಗೆ ಅನಾರೋಗ್ಯ ಇರುವ ಕಾರಣ ಚಿಕಿತ್ಸೆಗಾಗಿ ಸೇರಿಸಿದ್ದರು.
ಆದರೆ ಜನವರಿ 14ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾತ್ರ ಇಡೀ ಆಸ್ಪತ್ರೆಯಲ್ಲಿದ್ದ ರೋಗಿಗಳೆಲ್ಲ ಬೆಚ್ಚಿಬಿದ್ದಿದ್ದರು. ಯಾಕೆಂದರೆ, ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ನುಗ್ಗಿದ ಆರೋಪಿ ಲಕ್ಷ್ಮಿ ಎಂಬಾಕೆ ನಿನ್ನ ತಾಯಿಗೆ ಚಿಕಿತ್ಸೆ ನೀಡಬೇಕು ಅಂತಾ ರಮೇಶ್ರನ್ನು ಹೊರಗೆ ಕಳುಹಿಸಿದ್ದಾಳೆ. ಬಳಿಕ ಯಾವುದೇ ನೆನಪು ಬಾರದ ಅನ್ಸ್ತೇಶಿಯಾ ಇಂಜೆಕ್ಷನ್ ನೀಡಿ, ಕೈನಲ್ಲಿದ್ದ ಉಂಗುರ ಮತ್ತು ಕತ್ತಿನಲ್ಲಿದ್ದ ಸರ ಕದ್ದು ಎಸ್ಕೇಪ್ ಆಗಿದ್ದಳು.
ಅಸಲಿ ಬದಲು ನಕಲಿ ಸರ ಹಾಕಿ ಪರಾರಿ: ಎಸ್ಕೇಪ್ ಆಗುವ ಮುನ್ನ ಚಾಲಾಕಿ ಲಕ್ಷ್ಮೀ ಅಸಲಿ ಸರದ ಬದಲು ನಕಲಿ ಸರವನ್ನು ರೋಗಿಗೆ ಹಾಕಿ ಪರಾರಿಯಾಗಿದ್ದಳು. ವಾಪಸ್ ಬಂದು ರಮೇಶ್ ನೋಡಿದಾಗ ಕಳ್ಳಿಯ ಕೃತ್ಯ ಬಯಲಾಗಿದೆ. ಹಾಗೆಯೇ ನರ್ಸ್ ರೂಪದಲ್ಲಿ ಕಳ್ಳತನಕ್ಕೆ ಇಳಿದಿದ್ದ ಬಂಧಿತೆ ಲಕ್ಷ್ಮಿ, ರಮೇಶ್ ಅವರ ತಾಯಿಯ ಚಿನ್ನಾಭರಣ ಅಷ್ಟೇ ಅಲ್ಲದೇ ಈ ಹಿಂದೆಯೂ ಬೇರೆ ಬೇರೆ ರೋಗಿಗಳ ಚಿನ್ನಾಭರಣ ಸಹ ಕದ್ದಿರುವುದು ಗೊತ್ತಾಗಿದೆ.
'ನಿಮ್ಮ ತಾಯಿಗೆ ಚಿಕಿತ್ಸೆ ನೀಡಬೇಕು, ನೀವು ಹೊರ ಹೋಗಿ' ಎಂದು ರಮೇಶ್ಗೆ ಚಾಲಾಕಿ ಕಳ್ಳಿ ಹೇಳಿದ್ದಾಳೆ. 'ಹತ್ತು ನಿಮಿಷದ ಬಳಿಕ ಹೊರಬಂದು, ನಿಮ್ಮ ತಾಯಿ ಮಲಗಿದ್ದಾರೆ, ತೊಂದರೆ ಕೊಡಬೇಡಿ' ಎಂದು ತೆರಳಿದ್ದಾಳೆ. ಸ್ವಲ್ಪ ಸಮಯದ ಬಳಿಕ ಅಸಲಿ ನರ್ಸ್ ಬಂದಾಗ 'ಈಗ ತಾನೆ ಚಿಕಿತ್ಸೆ ನೀಡಿದ್ದೀರಿ ಮತ್ತೆ ಯಾಕೆ ಬಂದಿದ್ದೀರಾ?' ಎಂದು ರಮೇಶ್ ಪ್ರಶ್ನಿಸಿದ್ದಾರೆ. ಈಗ ತಾನೆ ಬರುತ್ತಿದ್ದೇನೆ ಎಂದು ನರ್ಸ್ ಉತ್ತರಿಸಿದಾಗ ಅನುಮಾನಗೊಂಡ ರಮೇಶ್, ತಾಯಿಯ ಬಳಿ ಬಂದು ಪರಿಶೀಲಿಸಿದಾಗ ಚಿನ್ನದ ಸರ, ಚಿನ್ನದ ಉಂಗುರದ ಬದಲು ನಕಲಿ ಆಭರಣ ಹಾಕಿರುವುದು ಬಯಲಾಗಿದೆ. ಬಳಿಕ ಕೂಲಂಕಷವಾಗಿ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ಇದೇ ರೀತಿಯಾಗಿ ಕೋಮಲಾ ಎಂಬಾಕೆಗೂ ವಂಚಿಸಿರುವುದು ಬಯಲಾಗಿದೆ.
ಈ ಹಿಂದೆ ಕೋಮಲಾ ಎಂಬುವರಿಗೂ ಸಹ ವಂಚನೆ ಮಾಡಿದ್ದಳು. ಅವರ ಬಳಿಯಲ್ಲಿದ್ದ ಚಿನ್ನಾಭರಣ ಕೂಡ ಕಳ್ಳತನ ಮಾಡಿಕೊಂಡು ಹೋಗಿದ್ದಳು. ಆದರೆ ಈ ಸಲ ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳಲ್ಲಿ ಪರಿಶೀಲಿಸಿದಾಗ ನಕಲಿ ನರ್ಸ್ ಚಲನವಲನ ಪತ್ತೆಯಾಗಿದೆ. ಈ ಸಲ ಕಳ್ಳತನಕ್ಕೆ ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ನರ್ಸ್ ಹೌದಾ ಅಲ್ಲವಾ?: ವಿಚಾರಣೆ ವೇಳೆ 'ತಾನೊಬ್ಬಳು ನರ್ಸ್, ತನ್ನ ಬಳಿ ವ್ಯಕ್ತಿಯೋರ್ವ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ. ಹಣ ನೀಡುವಂತೆ ಪೀಡಿಸುತ್ತಿದ್ದ ಹಾಗಾಗಿ ಬೇರೆ ದಾರಿ ಕಾಣದೆ ಕಳ್ಳತನಕ್ಕೆ ಇಳಿದಿದ್ದೆ ಅಂತಾ ಲಕ್ಷ್ಮಿ ಬಾಯ್ಬಿಟ್ಟಿದ್ದಾಳೆ. ಯಾರು..? ಯಾಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಹಾಗೂ ಆರೋಪಿ ನಿಜಕ್ಕೂ ನರ್ಸ್ ಹೌದಾ ಅಲ್ಲವಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಶೋಕನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಈಟಿವಿ ಭಾರತ್ ಗೆ ಪ್ರತಿಕ್ರಿಯೆ ನೀಡಿದ ದೂರುದಾರ ರಮೇಶ್ ಕುಮಾರ್ 'ಆರೋಪಿ ನನ್ನ ತಾಯಿಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಿದ್ದಾಳೆ. ವೈದ್ಯರನ್ನ ಕೇಳಿದಾಗ ಅದೊಂದು ಮಕ್ಕಳಿಗೆ ನೀಡಬಹುದಾದ ಲಘು ಪರಿಣಾಮಕಾರಿ ಇಂಜೆಕ್ಷನ್ ಎಂದರು. ಹೇಳಿಕೆಯನ್ನ ಲಿಖಿತ ರೂಪದಲ್ಲಿ ಕೇಳಿದಾಗ ಕೊಟ್ಟಿಲ್ಲ' ಎಂದಿದ್ದಾರೆ.
ಇದನ್ನೂಓದಿ: ಪುತ್ತೂರು: ಮನೆಯಂಗಳದಲ್ಲೇ ಯುವತಿಗೆ ಚೂರಿ ಇರಿದು ಕೊಲೆ.. ಪ್ರಕರಣ ದಾಖಲು