ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿಕ ಜಿಲೆಟಿನ್ ತುಂಬಿದ್ದ ಕಾರು ಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ನಿವೃತ್ತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಪ್ರಕರಣವನ್ನು ಎನ್‌ಐಎ ತೀವ್ರಗೊಳಿಸಿದ್ದು, ಘಟನೆ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ. ಕುರಾರ್ ಗ್ರಾಮದ ಸಂತೋಷ್ ಶೆಲ್ಲಾರ್ ಮತ್ತು ಆನಂದ್ ಜಾಧವ್ ಅವರನ್ನು ಮಲಾಡ್ ಎಂಬಲ್ಲಿ ವಶಕ್ಕೆ ಪಡೆಯಲಾಗಿದೆ.
ತನಿಖೆಯಲ್ಲಿ ಬಂಧಿತ ಆರೋಪಿಗಳ ಪಾತ್ರ ಇರುವುದು ತಿಳಿದುಬಂದ ಬಳಿಕ ಇವರನ್ನು ವಶಕ್ಕೆ ಪಡೆಯಲಾಗಿದೆ. ಹತ್ಯೆ, ಹಲ್ಲೆ ಹಾಗೂ ಇತರೆ ಅಪರಾಧ ಕೃತ್ಯಗಳನ್ನು ಎಸೆಗಿರುವ ಸಂಬಂಧ ಸಂತೋಷ್ ಶೆಲ್ಲಾರ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ತಿಂಗಳು ಶೆಲ್ಲಾರ್‌ಗೆ ಸೇರಿದ ತವೇರಾ ಕಾರನ್ನು ಸೀಜ್ ಮಾಡಲಾಗಿತ್ತು.
ಇದನ್ನೂ ಓದಿ: ಪ್ಯಾನ್-ಆಧಾರ್ ಲಿಂಕ್ಗೆ ಕೆಲವೇ ದಿನ ಬಾಕಿ: ಕಾರ್ಡ್ ನಿಷ್ಕ್ರಿಯಗೊಂಡರೆ ವ್ಯವಹಾರ ಬಂದ್.. ಇಲ್ಲಿದೆ ಜೋಡಣೆ ವಿಧಾನ
ಸದ್ಯ ಬಂಧಿತರನ್ನು ಎನ್ಐಎ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಜೂನ್ 21ರ ವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ. ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಜಿಲೆಟಿನ್ ತುಂಬಿದ್ದ ಕಾರು ಪತ್ತೆ ಹಾಗೂ ಕಾರು ಚಾಲಕನ ಹತ್ಯೆ ಪ್ರಕರಣ ಸಂಬಂಧ ಎಪಿಐ ಸಚಿನ್ ವಾಜೆ, ರಿಯಾಜುದ್ದೀನ್ ಕಾಜಿ, ಪೊಲೀಸ್ ಕಾನ್ಸ್‌ಟೇಬಲ್ ವಿನಾಯಕ ಶಿಂಧೆ, ಗುಜರಾತ್ ಮೂಲದ ಮೊಬೈಲ್ ಸರ್ವೀಸರ್ ನರೇಶ್ ಗೊರ್ ಮತ್ತು ಇನ್ಸ್‌ಪೆಕ್ಟರ್ ಸುನೀಲ್ ಮಾನೆ ಅವರನ್ನು ಎರಡೂ ಪ್ರಕರಣಗಳ ತನಿಖೆ ವಿಚಾರದಲ್ಲಿ ಅರೆಸ್ಟ್ ಮಾಡಲಾಗಿದೆ. ಇದೀಗ ಇಬ್ಬರ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.