ಬೆಳಗಾವಿ : ಚಳಿಗಾಲದ ಬೆಳಗಾವಿ ಅಧಿವೇಶನ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಎಂಇಎಸ್ ಮುಖಂಡ ಶುಭಂ ಶೆಳ್ಕೆ, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಮುಖಂಡ ರಮಾಕಾಂತ ಕುಂಡಸ್ಕರ್ ಸೇರಿ 38 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಇಲ್ಲಿನ ಎಂಟನೇ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ದೇಶದ್ರೋಹ, ಸಾರ್ವಜನಿಕ ಆಸ್ತಿ ಹಾನಿ ಸೇರಿದಂತೆ ಬೆಳಗಾವಿಯ ಮೂರು ಠಾಣೆಗಳಲ್ಲಿ 38 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಂಇಎಸ್ ಪುಂಡರಿಗೆ ಜಾಮೀನು ಮಂಜೂರಾಗಿದ್ದರೂ ಬಿಡುಗಡೆ ಭಾಗ್ಯ ಇಲ್ಲ.
ಬೆಳಗಾವಿಯ ಖಡೇಬಜಾರ್ ಠಾಣೆಯಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ಮಾತ್ರ ಈ ಎಲ್ಲರಿಗೂ ಜಾಮೀನು ಸಿಕ್ಕಿದೆ. ಮಾರ್ಕೆಟ್, ಕ್ಯಾಂಪ್ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು, ಈ ಸಂಬಂಧ 36 ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ.
ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ದಾಖಲಾದ ದೇಶದ್ರೋಹ ಕೇಸ್‌ನಲ್ಲಿ ಇಬ್ಬರಿಗೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ಜಾಮೀನು ಮಂಜೂರಾಗಿದೆ. ಎಂಇಎಸ್ ಯುವ ಘಟಕದ ಅಧ್ಯಕ್ಷ ಶುಭಂ ಶೆಳ್ಕೆ, ಉಪಾಧ್ಯಕ್ಷ ಅಂಕುಶ್ ಕೇಸರಕರ್‌ಗೆ ಜಾಮೀನು ಸಿಕ್ಕಿದೆ. ಇನ್ನುಳಿದ 36 ಆರೋಪಿಗಳ ಜಾಮೀನು ಅರ್ಜಿ ಸೋಮವಾರ ವಿಚಾರಣೆ ನಡೆಯಲಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ ಎಂಇಎಸ್ ಕಾರ್ಯಕರ್ತರು ಪುಂಡಾಟ ಮೆರೆದಿದ್ದರು. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು.
ಡಿಸೆಂಬರ್ 17ರ ರಾತ್ರಿ ಬೆಳಗಾವಿಯಲ್ಲಿ ಪ್ರತಿಭಟನೆ ಬಳಿಕ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಅಧಿವೇಶನಕ್ಕೆ ನಿಯೋಜನೆಗೊಂಡಿದ್ದ ಸರ್ಕಾರಿ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಲ್ಲೆಸೆಯಲಾಗಿತ್ತು. ದುಷ್ಕರ್ಮಿಗಳ ವಿರುದ್ಧ ಬೆಳಗಾವಿಯ ಮಾರ್ಕೆಟ್, ಕ್ಯಾಂಪ್, ಖಡೇಬಜಾರ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ