ಮುಂಬೈ: ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ.
ಮನ್ಸುಖ್ರನ್ನು ಮೊದಲೇ ಕೊಂದು, ಅವರ ಬಾಯಿಗೆ ಕರವಸ್ತ್ರ ತುರುಕಿ ಕೊಲೆಗಾರರು ಮೃತದೇಹವನ್ನು ನದಿಗೆ ಎಸೆದಿದ್ದಾರೆ. ಯಾವಾಗ ದೇಹದೊಳಗೆ ನೀರು ಸಂಪೂರ್ಣ ತುಂಬಿ, ಊದಿಕೊಳ್ಳುತ್ತದೆಯೋ ಆಗ ಶವ ನದಿಯ ಮೇಲೆ ತೇಲುತ್ತದೆ. ಬಾಯಿಯೊಳಗೆ ಕರವಸ್ತ್ರ ತುರುಕಿದರೆ ದೇಹದೊಳಗೆ ಬೇಗ ನೀರು ಹೋಗುವುದಿಲ್ಲ. ಹೀಗಾಗಿ ಮೃತದೇಹ ಹೊರಗೆ ಕಾಣಲು ಇನ್ನೂ ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಕೊಲೆಗಾರರ ಪ್ಲಾನ್ ಆಗಿತ್ತು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಹಿನ್ನೆಲೆ
ಕೆಲ ದಿನಗಳ ಹಿಂದೆ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್ಯುವಿ ಕಾರು ಪತ್ತೆಯಾಗಿತ್ತು. ಮುಂಬೈ ಕ್ರೈಂ ಬ್ರ್ಯಾಂಚ್ ಹಾಗೂ ಎಟಿಎಸ್ ಜಂಟಿಯಾಗಿ ಪ್ರಕರಣ ತನಿಖೆ ನಡೆಸುತ್ತಿದ್ದು, ಸ್ಕಾರ್ಪಿಯೋ ಕಾರು ಮಾಲೀಕ ಮುಂಬೈ ಮೂಲದ ಮನ್ಸುಖ್ ಹಿರೇನ್ ಎಂಬುದನ್ನು ಪತ್ತೆ ಹಚ್ಚಿತ್ತು. ಆದರೆ ಮಾರ್ಚ್ 5ರಂದು ಥಾಣೆಯ ನದಿಯೊಂದರಲ್ಲಿ ಮನ್ಸುಖ್ ಹಿರೇನ್ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿತ್ತು.