ವಿಶಾಖಪಟ್ಟಣಂ (ಆಂಧ್ರಪ್ರದೇಶ): ಮಗಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ ಕುಟುಂಬದ ಆರು ಮಂದಿಯನ್ನು ಸಂತ್ರಸ್ತೆಯ ತಂದೆ ಭೀಕರವಾಗಿ ಹತೈಗೈದಿದ್ದಾನೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಇಂತಹದೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ವಿಶಾಖಪಟ್ಟಣಂನ ಪೆಂಡೂರ್ತಿ ಮಂಡಲದ ಜುಟ್ಟಾಡ ಎಂಬಲ್ಲಿ ಬಟಿನಾ ಅಪ್ಪಲರಾಜು ಎಂಬಾತ ಮಧ್ಯರಾತ್ರಿಯಲ್ಲಿ ಕೃತ್ಯ ಎಸಗಿದ್ದಾನೆ.
ಅತ್ಯಾಚಾರ ಆರೋಪಿಯೇ ಪರಾರಿ
ಹೆತ್ತ ಮಗಳಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ತಂದೆ ಈ ಕಠೋರ - ದುಷ್ಟ ನಿರ್ಧಾರ ಕೈಗೊಂಡಿದ್ದಾನೆ. ಆದರೆ ಮೃತಪಟ್ಟ ಆರು ಮಂದಿ ಅತ್ಯಾಚಾರ ಆರೋಪಿಯ ಕುಟುಂಬಸ್ಥರಾಗಿದ್ದಾರೆ. ಇಲ್ಲಿ ಅತ್ಯಾಚಾರ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಕಂದಮ್ಮಗಳು ಮಾಡಿದ ತಪ್ಪೇನು?
ಮೃತರನ್ನು ಬಮ್ಮಿಡಿ ರಮಣ (63), ಬಮ್ಮಿಡಿ ಉಷರಾಣಿ (35) ಅಲ್ಲೂರಿ ರಮಾದೇವಿ (53), ನಕೆಟ್ಲಾ ಅರುಣಾ (37) ಹಾಗೂ ಎರಡು ವರ್ಷದ ಬಮ್ಮಿಡಿ ಉದಯ್ ಹಾಗೂ ಆರು ತಿಂಗಳ ಬಮ್ಮಿಡಿ ಉರ್ವಿಶಾ ಎಂದು ಗುರುತಿಸಲಾಗಿದೆ. ಯಾರದ್ದೂ ತಪ್ಪಿಗೆ, ಯಾರದ್ದೋ ದ್ವೇಷಕ್ಕೆ ಇಲ್ಲಿ ಏನೂ ಅರಿಯದ ಎರಡು ಕಂದಮ್ಮಗಳು ಬಲಿಯಾಗಿವೆ.
ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸರು ಕೊಲೆ ಆರೋಪಿ ಅಪ್ಪಲರಾಜುವನ್ನು ಬಂಧಿಸಿದ್ದು, ಅತ್ಯಾಚಾರ ಆರೋಪಿಗಾಗಿ ಬಲೆ ಬೀಸಿದ್ದಾರೆ.