ಭೋಪಾಲ್(ಮಧ್ಯಪ್ರದೇಶ್): ವಿವಾದಾತ್ಮಕ ಹೇಳಿಕೆಗಳೊಂದಿಗೆ ಸುದ್ದಿಯಲ್ಲಿರುವ ವೈರಾಗ್ಯಾನಂದ ಗಿರಿ ಮಹಾರಾಜ್ ಅಲಿಯಾಸ್ ಮಿರ್ಚಿ ಬಾಬಾನನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಇದೀಗ ಆರೋಪಿಯನ್ನು ಆಗಸ್ಟ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೈಸನ್‌ನ ಮಹಿಳೆಯೊಬ್ಬರು ಭೋಪಾಲ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಬಾನ ವಿರುದ್ಧ ಕೇಸು ದಾಖಲಿಸಿದ್ದರು.
ಸೋಮವಾರ ರಾತ್ರಿ ಗ್ವಾಲಿಯರ್‌ನ ಹೋಟೆಲ್‌ನಲ್ಲಿ ಬಾಬಾನನ್ನು ಬಂಧಿಸಿ ಭೋಪಾಲ್‌ಗೆ ಕರೆತಂದಿದ್ದು, ಪ್ರಸ್ತುತ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಆತನ ಮೊಬೈಲ್ ಜಪ್ತಿ ಮಾಡಿದ್ದು, ಅದರಲ್ಲಿ ಹಲವು ಮಹಿಳೆಯರ ದೂರವಾಣಿ ಸಂಖ್ಯೆಗಳು ಮತ್ತು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 506 ಮತ್ತು 342 ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
"ತನಗೆ ಮದುವೆಯಾಗಿ ನಾಲ್ಕು ವರ್ಷವಾದರೂ ಮಗುವಾಗದ ಕಾರಣ ಆತನನ್ನು ಭೇಟಿಯಾದೆ. ಅವರು ನನಗೆ ಮೂರ್ಚೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾರೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಿರ್ಚಿ ಬಾಬಾ 2019ರ ಲೋಕಸಭೆ ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ ಐದು ಕ್ವಿಂಟಲ್ ಮೆಣಸಿನಕಾಯಿ ಹೋಮ ಮಾಡಿಸಿ ನಂತರ ಹೆಚ್ಚು ಪ್ರಚಾರ ಪಡೆದುಕೊಂಡಿದ್ದರು. ಇತ್ತೀಚಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಮಗಳ ವಿಚಾರದಲ್ಲಿ ಮತ್ತು ಕಲಿ ಸಿನಿಮಾ ಮಾಡಿದವರ ತಲೆ ಕಡಿಯುವವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದು ಸೇರಿದಂತೆ ಈ ರೀತಿಯ ವಿವಾದಾತ್ಮಕ ಹೇಳಿಕೆಗಳ ಮೂಲಕ ಪ್ರಚಾರದಲ್ಲಿದ್ದರು.
ಇದನ್ನೂ ಓದಿ : ಪ್ರೀತಿಯಿಂದ 'ಅಂಕಲ್' ಎನ್ನುತ್ತಿದ್ದ ಬಾಲಕಿಯನ್ನೇ ₹2 ಲಕ್ಷಕ್ಕೆ ಮಾರಾಟ ಮಾಡಿದ ವ್ಯಕ್ತಿ!