ನವದೆಹಲಿ: ಲೋನ್ ಆ್ಯಪ್ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಮುಂದುವರೆಸಿದೆ. ಹಲವಾರು ಸಾಲ ನೀಡುವ ಕಂಪನಿಗಳ ಆಸ್ತಿ ಪಾಸ್ತಿಗಳನ್ನು ಸಹ ಇಡಿ ಈಗಾಗಲೇ ಜಪ್ತಿ ಮಾಡಿದೆ. 12 ಬ್ಯಾಂಕಿಂಗೇತರ ಕಂಪನಿಗಳ ಬ್ಯಾಂಕ್ ಖಾತೆಗಳಲ್ಲಿದ್ದ 105 ಕೋಟಿ ರೂಪಾಯಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಇಡಿ ಅಧಿಕಾರಿಗಳು ಇಂಡಿಟ್ರೇಡ್ ಫಿನ್ ಕಾರ್ಪ್, ಆಗ್ಲೊ ಫಿನ್ ಟ್ರೇಡ್ ಮತ್ತು 10 ಇತರ ಕಂಪನಿಗಳಿಗೆ ಸೇರಿದ 233 ಬ್ಯಾಂಕ್ ಖಾತೆಗಳನ್ನು ಗುರುತಿಸಿರುವ ಇಡಿ, ಈ ಖಾತೆಗಳಲ್ಲಿನ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕೆಲವು ಫಿನ್‌ಟೆಕ್ ಸಂಸ್ಥೆಗಳು ದಿವಾಳಿಯಾದ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಇಡಿ ಪತ್ತೆ ಮಾಡಿದೆ. ಅಲ್ಲದೇ ಈ ಫಿನ್‌ಟೆಕ್ ಸಂಸ್ಥೆಗಳ ಹಿಂದೆ ಕೆಲ ಚೀನಿ ರಾಷ್ಟ್ರೀಯರು ಇರುವುದು ಕಂಡು ಬಂದಿದೆ.
ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ; ಚೀನಾದಿಂದ ಫಿನ್‌ಟೆಕ್ ಕಂಪನಿಗಳ ಮೂಲಕ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿದೆ. ಇವು ಲೋನ್ ಆ್ಯಪ್‌ಗಳನ್ನು ರಚಿಸಿ, ಅವುಗಳ ಮೂಲಕ ಅಲ್ಪಾವಧಿ ಸಾಲಗಳನ್ನು ನೀಡಿವೆ. 7 ರಿಂದ 30 ದಿನಗಳಲ್ಲಿ ಮರುಪಾವತಿಸುವಂಥ ಕಡಿಮೆ ಅವಧಿಯ ಸಾಲಗಳನ್ನು ನೀಡಲಾಗುತ್ತದೆ.
ಸಾಲದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಅದರಲ್ಲಿ ಕೇವಲ ಆಧಾರ್ ಕಾರ್ಡ್ ಮತ್ತು ಫೋನ್ ಸಂಖ್ಯೆಯನ್ನು ನಮೂದಿಸುವ ಮೂಲಕ ಸಾಲವನ್ನು ನೀಡಲಾಗುತ್ತದೆ. 12 ಸಂಸ್ಥೆಗಳು ಒಟ್ಟಾರೆಯಾಗಿ 4430 ಕೋಟಿ ರೂಪಾಯಿ ಸಾಲ ನೀಡಿವೆ ಎಂದು ಇಡಿ ಅಧಿಕಾರಿಗಳು ಗುರುತಿಸಿದ್ದಾರೆ.
819 ಕೋಟಿ ರೂ. ಲಾಭ: ಇಂಥ ಸಾಲಗಳ ಮೂಲಕ ಈ ಆ್ಯಪ್ಗಳು 819 ಕೋಟಿ ರೂಪಾಯಿ ಲಾಭ ಮಾಡಿವೆ. ಅಲ್ಲದೆ ನೀಡಿದ ಸಾಲಕ್ಕೆ ಅತ್ಯಧಿಕ ಬಡ್ಡಿ ದರ ವಿಧಿಸಿ ಸಾಲಗಾರರಿಗೆ ಕಿರುಕುಳ ನೀಡಿವೆ. ಇನ್ನು ಸಾಲ ಕಟ್ಟದೆ ಡಿಫಾಲ್ಟ್ ಆದವರ ಸೋಶಿಯಲ್ ಮೀಡಿಯಾದಲ್ಲಿ ಸಂದೇಶಗಳನ್ನು ಕಳುಹಿಸಿ ವಿಪರೀತ ಕಿರುಕುಳ ನೀಡಲಾಗಿದೆ. ಲೋನ್ ಆ್ಯಪ್ ಮ್ಯಾನೇಜರ್ಗಳ ಕಿರುಕುಳ ತಾಳಲಾರದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವುದು ಇಡಿ ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ.
ಲೋನ್ ಆ್ಯಪ್ಗಳ ವಿರುದ್ಧ ಎಫ್ಐಆರ್: ಹೈದರಾಬಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಲೋನ್ ಆ್ಯಪ್ಗಳ ಕುರಿತು 3 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 4 ಎನ್‌ಬಿಎಫ್‌ಸಿಗಳಿಗೆ ಸೇರಿದ 158.9 ಕೋಟಿ ರೂಪಾಯಿಗಳನ್ನು ಇಡಿ ಅಧಿಕಾರಿಗಳು ಇಲ್ಲಿಯವರೆಗೆ ಜಪ್ತಿ ಮಾಡಿದ್ದಾರೆ. ಇದುವರೆಗೆ ಇಡಿ ಅಧಿಕಾರಿಗಳು ಒಟ್ಟು 264.3 ಕೋಟಿ ರೂಪಾಯಿ ಮೌಲ್ಯದ ಸಾಲದ ಆ್ಯಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಓದಿ: ಗ್ರಾಹಕರೇ ಎಚ್ಚರ: 55 ಸಾವಿರ ಸಾಲಕ್ಕೆ 2 ಲಕ್ಷ ರೂ. ಕಟ್ಟಿದರೂ ಯುವತಿಗೆ 76 ನಂಬರ್ಗಳಿಂದ ಅಶ್ಲೀಲ ಚಿತ್ರಗಳ ರವಾನೆ!