ಕೋಲ್ಕತ್ತಾ: ಕೋಲ್ಕತ್ತಾ ಪೊಲೀಸ್ ಇಲಾಖೆಯ ವಿಶೇಷ ತನಿಖಾ ದಳದ ಪೊಲೀಸರು ಧರ್ಮತಾಲಾ ವೃತ್ತದಲ್ಲಿ ಸೋಮವಾರ ರಾತ್ರಿ 10 ಲಕ್ಷ ರೂಪಾಯಿ ಮುಖಬೆಲೆಯ ನಕಲಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ನೋಟುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಪಕ್ಕದ ಅಸ್ಸೋಂ ರಾಜ್ಯದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತರನ್ನು ಶೇಖರ್ ಅಲಿ ಮತ್ತು ಅಬ್ದುಲ್ ರಜಾಕ್ ಖಾನ್ ಎಂದು ಗುರುತಿಸಲಾಗಿದೆ. ಅಸ್ಸೋಂನ ಕೆಲವು ಗ್ಯಾಂಗ್‌ಗಳು ಕೋಲ್ಕತ್ತಾದಲ್ಲಿ ನಕಲಿ ನೋಟುಗಳ ವ್ಯವಹಾರ ನಡೆಸುತ್ತಿರುವ ಬಗ್ಗೆ ಎಂಬ ರಹಸ್ಯ ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂದು ಲಾಲ್‌ಬಜಾರ್ ಮೂಲಗಳು ತಿಳಿಸಿವೆ. ಅಸ್ಸೋಂನಿಂದ ನಕಲಿ ನೋಟುಗಳನ್ನು ತಂದು ಪಶ್ಚಿಮ ಬಂಗಾಳದಲ್ಲಿ ಚಲಾವಣೆಗೆ ತರುವ ಗುಂಪೊಂದು ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಮಾಹಿತಿಯ ನಂತರ ಗುಪ್ತಚರ ವಿಭಾಗವು ಎಲ್ಲ ಪೊಲೀಸ್ ವಿಭಾಗಗಳಿಗೆ ಸಂದೇಶ ರವಾನಿಸಿತ್ತು. ಹೀಗಾಗಿ ಈ ನಕಲಿ ನೋಟಿನ ಗುಂಪಿನ ಮೇಲೆ ಕಳೆದ ಹಲವಾರು ದಿನಗಳಿಂದ ನಿಗಾ ಇಡಲಾಗಿತ್ತು.
ತನಿಖಾ ಕಾರ್ಯಾಚರಣೆ ಸಂದರ್ಭದಲ್ಲಿ ಎಸ್‌ಟಿಎಫ್‌ಗೆ ಅಸ್ಸೋಂನ ಈ ಇಬ್ಬರು ನಕಲಿ ನೋಟು ಚಲಾವಣೆಗಾರರ ಸುಳಿವು ಸಿಕ್ಕಿತ್ತು. ಇವರು ಸೋಮವಾರ ತಡರಾತ್ರಿ ಧರ್ಮತಾಲದ ಮೇಯೊ ರಸ್ತೆ ಮತ್ತು ಡಫರಿನ್ ರಸ್ತೆಯಲ್ಲಿ ನಕಲಿ ನೋಟುಗಳನ್ನು ಸರಬರಾಜು ಮಾಡಲು ಬರುತ್ತಾರೆ ಎಂದು ಲಾಲಬಜಾರ್ ಗುಪ್ತಚಾರರಿಗೆ ಗೌಪ್ಯ ಮೂಲಗಳಿಂದ ತಿಳಿದು ಬಂದಿತ್ತು. ನಕಲಿ ನೋಟುಗಳನ್ನು ರಾಜ್ಯದಲ್ಲಿ ಚಲಾವಣೆಗೆ ತರಲು ಅವನ್ನು ಸ್ಥಳೀಯ ರೌಡಿಗಳಿಗೆ ಹಸ್ತಾಂತರಿಸಲು ಇಬ್ಬರೂ ಯೋಜಿಸಿದ್ದರು. ಈ ಮಾಹಿತಿ ಪಡೆದ ಪೊಲೀಸರು ಗುರುತು ಮರೆಮಾಚಿ ಸ್ಥಳದಲ್ಲಿ ಹೊಂಚುಹಾಕಿ ಕುಳಿತಿದ್ದರು.
ನಂತರ ಆ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅವರನ್ನು ಬಂಧಿಸಿ ತಪಾಸಣೆ ನಡೆಸಿದಾಗ ಅವರ ಬಳಿ 10 ಲಕ್ಷ ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಬಂಧಿತರನ್ನು ಲಾಲ್‌ಬಜಾರ್‌ಗೆ ಕರೆತರಲಾಯಿತು. ಕೋಲ್ಕತ್ತಾ ಪೊಲೀಸ್ ಕಾರ್ಯಪಡೆಯ ಪತ್ತೆದಾರರು ಈಗ ಬಂಧನದಲ್ಲಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಅವರು ಯಾರಿಗೆ ನೋಟುಗಳನ್ನು ಪೂರೈಸಲು ಪ್ರಯತ್ನಿಸುತ್ತಿದ್ದರು ಮತ್ತು ದಂಧೆಯಲ್ಲಿ ಬೇರೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ.
ಸೂರತ್‌ನಲ್ಲಿ 5 ಕೋಟಿ ಮೌಲ್ಯದ ನಕಲಿ ನೋಟು ವಶ: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಪೊಲೀಸರು ಸೂರತ್‌ನಲ್ಲಿ ಆರು ಜನರನ್ನು ಬಂಧಿಸಿದ್ದು, ಅವರಿಂದ 5 ಕೋಟಿ ರೂಪಾಯಿ ಮುಖಬೆಲೆಯ 500 ಮತ್ತು 2000 ರೂಪಾಯಿಗಳ ನಕಲಿ ನೋಟುಗಳು ಮತ್ತು 50 ನಕಲಿ ಚಿನ್ನದ ತುಂಡುಗಳು ಮತ್ತು 10 ನಕಲಿ ಬೆಳ್ಳಿ ಬಾರ್‌ಗಳನ್ನು ವಶಪಡಿಸಿಕೊಂಡಿದೆ. ಇವರು ನಕಲಿ ನೋಟು ಮತ್ತು ನಕಲಿ ಚಿನ್ನದ ಗಟ್ಟಿಗಳನ್ನು ಉಪಯೋಗಿಸಿ ಜನರನ್ನು ವಂಚಿಸುವ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಅಮ್ರೋಲಿ ನಿವಾಸಿ ರಿಯಲ್ ಎಸ್ಟೇಟ್ ಬ್ರೋಕರ್ ಮನ್ಸುಖ್ ಉಮ್ರೇಥಿಯಾ (55), ಆತನ ಮಗ ಮಗ ಪಿಯೂಷ್, ಮುಕೇಶ್ ಸರ್ವಯ್ಯ, ಚಾಲಕ ಜಯಸುಖ್ ಬರಾದ್, ನರೇಶ್ ಅಹಿರ್ ಮತ್ತು ಪರೇಶ್ ಪರ್ಮಾರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಖೋಟಾನೋಟು ಮುದ್ರಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಆಂಧ್ರ ಗ್ಯಾಂಗ್ ಅರೆಸ್ಟ್...