ಬೆಳ್ತಂಗಡಿ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಟ್ಲಡ್ಕ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದಿದೆ.
ನದಿಯ ಕಿನಾರೆಯಲ್ಲಿ ಮರಳನ್ನು ತೆಗೆದು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ 6 ಆರೋಪಿಗಳನ್ನು ವಶಕ್ಕೆ ಪಡೆದು ಸುಮಾರು 30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಧರ್ಮಸ್ಥಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂದೇಶ, ಜಯಂತ, ರಕ್ಷಿತ್, ಅವಿನಾಶ್, ಕೇಶವ ಹಾಗೂ ಶರೀಫ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಟ್ಲಡ್ಕ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ದೋಣಿಗೆ ಅಳವಡಿಸಲಾದ ಡ್ರಜ್ಜಿಂಗ್ ಯಂತ್ರದ ನೆರವಿನಿಂದ ಮರಳು ತೆಗೆದು ಸಾಗಾಟ ಮಾಡುತ್ತಿರುವುದು ಧರ್ಮಸ್ಥಳ ಠಾಣಾ ಪೊಲೀಸರ ಗಮನಕ್ಕೆ ಬಂದಿದೆ.
ಈ ಸಂದರ್ಭದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಮರಳು ತೆಗೆದು ಸಾಗಾಟಕ್ಕೆ ಯಾವುದೇ ದಾಖಲೆ ಪತ್ರಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಕ್ರಮಕ್ಕೆ ಬಳಕೆಯಾಗುತ್ತಿದ್ದ ದೋಣಿಗೆ ಅಳವಡಿಸಿದ ಡ್ರಜ್ಜಿಂಗ್ ಮಿಷನ್, ಕ್ರೇನ್, ಟೋಯಿಂಗ್ ವಾಹನ, ಕಾರು, ದ್ವಿಚಕ್ರ ವಾಹನ, ಸುಮಾರು 20 ಟನ್ಗಳಷ್ಟು ಮರಳು ಸೇರಿದಂತೆ ಸುಮಾರು 36 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.