ಅಹಮದಾಬಾದ್(ಗುಜರಾತ್): 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ತೀಸ್ತಾ ಸೆಟಲ್ವಾಡ್ ಮತ್ತು ಹಿಂದಿನ ಪೊಲೀಸ್ ಡಿಜಿಪಿ ಆರ್ಬಿ ಶ್ರೀಕುಮಾರ್ ಅವರಿಗೆ ಜಾಮೀನು ನೀಡಲು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಈ ಮುನ್ನ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಬ್ಬರ ಜಾಮೀನು ನೀಡುವ ಕುರಿತಾದ ತೀರ್ಪು ಕಾಯ್ದಿಸಿರಿಸಿತ್ತು. ಇಬ್ಬರಿಗೂ ಜಾಮೀನು ನೀಡದಂತೆ ಸರ್ಕಾರ ಮನವಿ ಮಾಡಿತ್ತು.
2002ರ ಗುಜರಾತ್ ಗಲಭೆ ಕುರಿತಂತೆ ತೀಸ್ತಾ ಸೆಟಲ್ವಾಡ್ ಅವರ ಎನ್ಜಿಓ ಪೊಲೀಸರಿಗೆ ಆಧಾರರಹಿತ ಮಾಹಿತಿಗಳನ್ನು ನೀಡಿದ ಆರೋಪದ ಮೇಲೆ, ಗುಜರಾತ್ ಕ್ರೈಂ ಬ್ರ್ಯಾಂಚ್ ಪೊಲೀಸರು ಜೂನ್ 26 ರಂದು ತೀಸ್ತಾರನ್ನು ಬಂಧಿಸಿದ್ದರು. ತೀಸ್ತಾ ಸೆಟಲ್ವಾಡ, ಆರ್ಬಿ ಶ್ರೀಕುಮಾರ್ ಮತ್ತು ಸಂಜೀವ್ ಭಟ್ಟ ಇವರೆಲ್ಲರೂ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇನ್ನೂ ಹಲವಾರು ಗಣ್ಯ ವ್ಯಕ್ತಿಗಳ ತೇಜೋವಧೆಯ ಯತ್ನ ಮಾಡಿರುವ ಬಗ್ಗೆ ಎಸ್‌ಐಟಿ ಈಗಾಗಲೇ ಆಪಾದನೆಗಳನ್ನು ಹೊರಿಸಿದೆ.
2002ರ ಗಲಭೆಯ ನಂತರ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ತೇಜೋವಧೆ ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಆಗ ಸೋನಿಯಾ ಗಾಂಧಿ ಸಲಹೆಗಾರರಾಗಿದ್ದ ಕಾಂಗ್ರೆಸ್ ಮುಖಂಡ ದಿ. ಅಹ್ಮದ್ ಪಟೇಲ್ರಿಂದ ತೀಸ್ತಾ, ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ 30 ಲಕ್ಷ ರೂಪಾಯಿ ಪಡೆದಿದ್ದರು ಎಂದು ಈ ತಿಂಗಳ ಆರಂಭದಲ್ಲಿ ಎಸ್‌ಐಟಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸೆಟಲ್ವಾಡ್ ಮತ್ತು ಆರ್ಬಿ ಶ್ರೀಕುಮಾರ್ ಅವರ ವಿರುದ್ಧದ ಕ್ರಿಮಿನಲ್ ಸಂಚು ಮತ್ತು ಫೋರ್ಜರಿ ಪ್ರಕರಣಗಳ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿತ್ತು.
ತೀಸ್ತಾ, ಶ್ರೀಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿರುದ್ಧ ಎಸ್‌ಐಟಿ ಎಸಿಪಿ ಬಿ.ಸಿ.ಸೋಲಂಕಿ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಮಿತೇಶ್ ಅಮೀನ್ ಮತ್ತು ಅಮಿತ್ ಪಟೇಲ್ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಆರೋಪಿಗಳು ಕಾಂಗ್ರೆಸ್‌ನಿಂದ ಅಕ್ರಮ ಹಣ ಮತ್ತು ಇತರ ಪ್ರಯೋಜನಗಳನ್ನು ಪಡೆಯುವ ಉದ್ದೇಶದಿಂದ ದೊಡ್ಡ ಸಂಚು ರೂಪಿಸಿದ್ದರು ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಅಹಮದಾಬಾದ್‌ನ ಮೆಟ್ರೋಪಾಲಿಟನ್ ನ್ಯಾಯಾಲಯವು ಜುಲೈ 2 ರಂದು ಸೆಟಲ್ವಾಡ್ ಮತ್ತು ಶ್ರೀಕುಮಾರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಹಣವನ್ನು ದುರುಪಯೋಗಪಡಿಸಿಕೊಂಡ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು, 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ, ಕಾಂಗ್ರೆಸ್ ಮಾಜಿ ಸಂಸದ ದಿವಂಗತ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಝಕಿಯಾ ಜಾಫ್ರಿಯನ್ನು ತೀಸ್ತಾ ಒಂದು ಸಾಧನವಾಗಿ ಬಳಸಿಕೊಂಡಿದ್ದಾರೆ ಎಂದು ಎಸ್‌ಐಟಿ ಹೇಳಿದೆ.