ಶ್ರೀನಿವಾಸಪುರ(ಕೋಲಾರ): ಬಸ್ಸಿನಲ್ಲಿ ಯುವತಿಯನ್ನ ಚುಡಾಯಿಸಿದ್ದಕ್ಕೆ ಯುವಕರಿಗೆ ಥಳಿಸಿದ ಪ್ರಕರಣ ತಾರಕಕ್ಕೇರಿದೆ. ಥಳಿತಕ್ಕೊಳಗಾದ ಯುವಕ, ಇತ್ತೀಚೆಗೆ ತನ್ನನ್ನು ಥಳಿಸಿದ್ದ ಯುವಕರು ಹಾಗೂ ಯುವತಿಗೆ ದೊಣ್ಣೆಗಳಿಂದ ಹೊಡೆದಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಗ್ರಾಮದ ಬಳಿ ನಡೆದಿದೆ.
ಸೆ.6 ರಂದು ಬಾಬು ಎಂಬ ಯುವಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದ್ದರು. ಅಭಿ, ನಾಗೇಂದ್ರ, ಗಂಗಾಧರ್, ನರೇಶ್ ಎಂಬ ಯುವಕರ ಗುಂಪು ಹಲ್ಲೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಗೌನಿಪಲ್ಲಿ ಗ್ರಾಮದಿಂದ ಶ್ರೀನಿವಾಸಪುರಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತಾಡಿಗೋಳ್ ಗ್ರಾಮದ ಯುವತಿಯರನ್ನು ಚುಡಾಯಿಸಿದ್ದ ಬಾಬು ಹಾಗೂ ಮತ್ತೊಬ್ಬ ಯುವಕನಿಗೆ ಚುಡಾಯಿಸಬೇಡ ಎಂದು ಯುವತಿಯವರ ಕಡೆಯವರು ಎಚ್ಚರಿಕೆ ನೀಡಿದ್ದರು.
ಆದರೂ ಮತ್ತೊಮ್ಮೆ ಚುಡಾಯಿಸಿದ್ದಕ್ಕೆ ಬಾಬು ಹಾಗೂ ಹಿಂಬದಿಯ ಸೀಟ್‌ನಲ್ಲಿದ್ದವನಿಗೆ ಧರ್ಮದೇಟು ನೀಡಿದ್ದರು. ಬಾಬು ಎಂಬ ಯುವಕನಿಗೆ ಥಳಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದರಿಂದ ರೊಚ್ಚಿಗೆದ್ದ ಬಾಬು ಆ್ಯಂಡ್ ಟೀಂ ಇದೀಗ ತಮಗೆ ಥಳಿಸಿದ್ದ ಯುವಕರಿಗೆ ಹಾಗೂ ಯುವತಿಯರಿಗೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.
ಯಶಸ್ವಿನಿ, ಗೌರಿ ಹಾಗೂ ಭಾವನ ಎಂಬ ಯುವತಿಯರು ಹಲ್ಲೆಗೊಳಗಾಗಿದ್ದಾರೆ. ಗೌನಿಪಲ್ಲಿಯಿಂದ ಚಿಂತಾಮಣಿಗೆ ಹೋಗುವ ಬಸ್ ನಲ್ಲಿ ಈ ಘಟನೆ ನಡೆದಿದೆ. ಸದ್ಯ ಎರಡು ಕಡೆಯವರಿಂದ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿವೆ.
ಇದನ್ನೂ ಓದಿ: ಬಸ್‌ನಲ್ಲಿ ಯುವತಿಯರನ್ನು ಚುಡಾಯಿಸಿದ ಪುಂಡ: ಸಖತ್ತಾಗೇ ಥಳಿಸಿದ ಪ್ರಯಾಣಿಕರು! -Video