ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ತಡರಾತ್ರಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸ್ಟೀಫನ್, ಅಜಯ್, ಪುರುಷೋತ್ತಮ್ ಬಂಧಿತ ಆರೋಪಿಗಳು. ಪುರುಷೋತ್ತಮ್ ಕೊಲೆಗೂ ಮುನ್ನ ಸಿಸಿಟಿವಿ ತಿರುಗಿಸಿದ್ದ ಆಸಾಮಿಯಾಗಿದ್ದಾನೆ.
ಮೃತ ರೇಖಾ ಸಂಬಂಧಿ ಸಂಜಯ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ಕಾರ್ಯ ಪ್ರವೃತ್ತರಾಗಿ ನಿನ್ನೆ ಮಧ್ಯಾಹ್ನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಪೀಟರ್ ಮತ್ತು ಸೂರ್ಯ ಎಂಬುವರ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿತ್ತು. ಇದೀಗ ಘಟನೆ ಸಂಬಂಧ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದಂತಾಗಿದೆ. ಪೀಟರ್, ಸೂರ್ಯನನ್ನು ಬಂಧಿಸುವ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರು. ದಾಳಿ ವೇಳೆ ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ ಗಾಯಗೊಂಡಿದ್ದರು. ಸ್ಟೀಫನ್ ಇಡೀ ಪ್ರಕರಣ ಪ್ಲಾನ್ ಮಾಡಿದ್ದು, ಎಲ್ಲ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: Murder Video: ರೇಖಾ ಕದಿರೇಶ್ ಹತ್ಯೆಯ ಭೀಕರ ವಿಡಿಯೋ ವೈರಲ್
ತಮ್ಮ ಮೇಲೆ ದಾಳಿ ನಡೆದ ಕಾರಣ ಆತ್ಮರಕ್ಷಣೆಗಾಗಿ ಉಪ್ಪಾರಪೇಟೆ ಇನ್ಸ್ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್‌ಪೇಟೆ ಇನ್ಸ್ಪೆಕ್ಟರ್ ಚಿದಾನಂದ್ ಶುಕ್ರವಾರ ಬೆಳಗ್ಗೆ ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ್ದರು. ಆ ಸಂದರ್ಭದಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮತ್ತೆ ಮೂವರ ಬಂಧನವಾಗಿದ್ದು, ಇಂದು ಒಟ್ಟು ಐವರು ಆರೋಪಿಗಳ ವೈದ್ಯಕೀಯ ಪರೀಕ್ಷೆ ನಂತರ ಕೋರ್ಟ್ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.
ರೇಖಾ ಸಹೋದರಿ ಮಗ ವಶಕ್ಕೆ:
ರೇಖಾ ಕದಿರೇಶ್ ಸಹೋದರಿ ಮಾಲಾ ಎಂಬುವರ ಮಗ ಅರುಳ್ ಎಂಬಾತನನ್ನೂ ಕೂಡ ವಶಕ್ಕೆ ಪಡೆಯಲಾಗಿದೆ. ಆದರೆ ಈತನ ಬಗ್ಗೆ ಅಧಿಕೃತ ಬಂಧನ ವಾರಂಟ್ ಹೊರಡಿಸಲಾಗಿಲ್ಲ. ಅಲ್ಲದೆ, 22ರಿಂದ 25 ಜನರನ್ನು ವಶಕ್ಕೆ ಪಡೆದು ವಿಚರಣೆಗೊಳಪಡಿಸಲಾಗಿದೆ ಎಂದು ಸಂಜೀವ್ ಪಾಟೀಲ್ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.