ಬೆಂಗಳೂರು: ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ದಂತ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೇರಳ ಮೂಲದ ಆಲ್ವಿನ್ (23) ಮೃತ ದಂತ ವೈದ್ಯಕೀಯ ವಿದ್ಯಾರ್ಥಿ. ಈತನ ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಬು ಸಾಬ್ ಪಾಳ್ಯದಲ್ಲಿ ಆಲ್ವಿನ್ ಮನೆ ಮಾಡಿಕೊಂಡಿದ್ದು, ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದ.
ಮಂಗಳವಾರ ರಾತ್ರಿ 9.30ರ ಸುಮಾರಿನಲ್ಲಿ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬೆಂಗಳೂರು-ಮೈಸೂರು ರಸ್ತೆಯ ದೊಡ್ಡಬೆಲೆ ಕ್ರಾಸ್ ಸಮೀಪ ಅತಿವೇಗವಾಗಿ ಬಂದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಆಲ್ವಿನ್ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿ ವಾರಸುದಾರರಿಗೆ ಬುಧವಾರ ಹಸ್ತಾಂತರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತವೆಸಗಿರುವ ಕ್ಯಾಂಟರ್ ಚಾಲಕನಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.