ದಿಂಡುಗಲ್(ತಮಿಳುನಾಡು): ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆಂದು ಸೇಡು ತೀರಿಸಿಕೊಳ್ಳಲು ವಿದ್ಯಾರ್ಥಿಯೊಬ್ಬ 6 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ದಿಂಡುಗಲ್ ಜಿಲ್ಲೆಯ ನಾಥಂ ಸಮೀಪದ ಕೊಟ್ಟಾಯೂರಿನಲ್ಲಿ ನಡೆದಿದೆ. ಹರಿಹರ ದೀಪನ್ (6) ಮೃತ ದುರ್ದೈವಿಯಾಗಿದ್ದು, ಆರೋಪಿ ಅಜಯ್ ರತ್ನಂನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅಜಯ್ ರತ್ನಂ ಕೆಲವು ವಾರಗಳ ಹಿಂದೆ ಮೃತ ಬಾಲಕ ಹರಿಹರ ದೀಪನ್ ಅವರ ಸಹೋದರಿಯ ಫೋಟೋವನ್ನು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ದೀಪನ್ ತಂದೆ ರಾಮಕೃಷ್ಣನ್ ಅಜಯ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರಿಂದ ಕುಪಿತಗೊಂಡ ಆರೋಪಿ, ರಾಮಕೃಷ್ಣನ್ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲು ಹರಿಹರ ದೀಪನ್ ಅವರನ್ನು ಊರಿನ ಹೊರಗಡೆ ಕರೆದೊಯ್ದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ತಪ್ಪೊಪ್ಪಿಕೊಂಡ ಆರೋಪಿ'
ನಾಥಂ ಸಮೀಪದ ಕೊಟ್ಟಾಯೂರಿನ ರಾಮಕೃಷ್ಣನ್ ಅವರು ತುವರಂಕುರಿಚಿಯ ಹೋಟೆಲ್‌ವೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾನೆ. ಆಟವಾಡಲು ಹೋದ ಹರಿಹರ ದೀಪನ್ ಸಂಜೆಯಾದರೂ ಮನೆಗೆ ಬಾರದೆ ಹಿನ್ನೆಲೆಯಲ್ಲಿ ಆತಂಕಗೊಂಡ ಆತನ ತಾಯಿ ಊರೆಲ್ಲಾ ಹುಡುಕಾಡಿದ್ದಾರೆ. ಆದರೆ ಪುತ್ರನ ಸುಳಿವು ಪತ್ತೆಯಾಗಿರಲಿಲ್ಲ.
ಊರಿನ ಹೊರಗಡೆ ಹರಿಹರ ದೀಪನ್ ಶವ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ನಾಥಂ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಸ್ಥಳೀಯರಿಂದ ಘಟನೆ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಆ ವೇಳೆ ಹರಿಹರ ದೀಪನ್ ಚಿಕ್ಕಪ್ಪನ ಮಗ ಅಜಯ್ ರತ್ನಂ ಮೇಲೆ ಪೊಲೀಸರಿಗೆ ಅನುಮಾನ ಬಂದಿತ್ತು. ಅಜಯ್ ರತ್ನಂ ಕಾಲೇಜು ವಿದ್ಯಾರ್ಥಿಯಾಗಿದ್ದು, ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಲಕನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.