ಹೈದರಾಬಾದ್: ಇಲ್ಲಿನ ಫಿಲ್ಮ್ ನಗರದಲ್ಲಿ ನಿಖಿಲ್ ರೆಡ್ಡಿ ಮತ್ತು ಇತರರ ನಡುವೆ ಭೂಮಿಗೆ ಸಂಬಂಧಿಸಿದಂತೆ ವಿವಾದವಿತ್ತು. ಈ ಸಂಬಂಧ ಹೈದರಾಬಾದ್ನ ಮಾಜಿ ಮೇಯರ್, ಮೆಹದಿಪಟ್ನಂ ವಿಭಾಗದ ಎಐಎಂಐಎಂ ಕಾರ್ಪೊರೇಟರ್ ಆಗಿರುವ ಮೊಹಮ್ಮದ್ ಮಜೀದ್ ಹುಸೇನ್ ಮತ್ತು ಆತನ ಬೆಂಬಲಿಗಲು ಅಲ್ಲಿಗೆ ಭೇಟಿ ನೀಡಿ ವಿವಾದಿತ ಸ್ಥಳಕ್ಕೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನಿಖಿಲ್ ರೆಡ್ಡಿ ಮತ್ತು ಹುಸೇನ್ ನಡುವೆ ವಾಗ್ವಾದ ನಡೆದಿದೆ.
ಮಾಹಿತಿ ಅರಿತ ಬಂಜಾರಾ ಹಿಲ್ಸ್ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ಮಜೀದ್ ಹುಸೇನ್ ಮತ್ತು ಅವರ ಬೆಂಬಲಿಗರು ಸ್ಥಳದಲ್ಲಿದ್ದ ಪೊಲೀಸರೊಂದಿಗೆ ಮಾತಿಗೆ ನಿಂತಿದ್ದಾರೆ. ಅಷ್ಟೇ ಅಲ್ಲದೆ, ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರಿಗೆ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆ ಸಂಬಂಧ ಮಜೀದ್ ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕನ ಮೇಲೆ ದಾಳಿ) ಮತ್ತು 506 (ಬೆದರಿಕೆ) ಅಡಿಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಜುಬಿಲಿ ಹಿಲ್ಸ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಿಂದ 850 ಚದರ್ ಗಜಗಳಷ್ಟು ಅಳತೆಯ ಭೂಮಿಯನ್ನು ಖರೀದಿಸಿದ್ದೇನೆ ಎಂದು ನಿಖಿಲ್ ರೆಡ್ಡಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಮಜೀದ್ ಹುಸೇನ್ ಅವರ ಬೆಂಬಲಿಗರು ಆ ಜಾಗವನ್ನು ಹನೀಫ್ ಅವರಿಂದ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.