ಧಾರವಾಡ: ಲಾಕ್ಡೌನ್ ಸಮಯದಲ್ಲಿ ಮದುವೆ ಸಮಾರಂಭ ಏರ್ಪಡಿಸಲು ನಿಷೇಧ ಹೇರಲಾಗಿದೆ. ಆದ್ರೂ ಅನುಮತಿ ಇಲ್ಲದೇ ನಡೆದ ಮದುವೆಗೆ ಹೋಗಿ ಬರುತ್ತಿದ್ದವರ ಮೇಲೆ ವಿದ್ಯಾಗಿರಿ ಪೊಲೀಸರು ದೂರು ದಾಖಲಿಸಿದ್ದಾರೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮದುವೆ ನಡೆದಿತ್ತು. ಕಲಘಟಗಿ ತಾಲೂಕಿನ ಸಂಗದೇವರಕೊಪ್ಪ ಗ್ರಾಮದಿಂದ 15 ರಿಂದ 20 ಜನ ವಧುವಿನ ಕಡೆಯವರು ಮದುವೆ ಮುಗಿಸಿಕೊಂಡು ವಾಪಸ್ ಹೊರಟಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಿಸಿದಾಗ ಅನುಮತಿ ಇಲ್ಲದೇ ಮದುವೆ ನಡೆದಿರುವುದು ಬೆಳಕಿಗೆ ಬಂದಿದೆ.
ಮದುವೆಗೆ ಹೋಗಿದ್ದ ಟ್ರ್ಯಾಕ್ಟರನಲ್ಲಿ 15-20 ಜನರಿದ್ದರು. ಈ ಹಿನ್ನೆಲೆ ನಗರದ ನವಲೂರು ಸೇತುವೆ ಬಳಿ ತಹಶೀಲ್ದಾರ್ ಡಾ. ಸಂತೋಷ್ ಬಿರಾದಾರ ಅವರು ಟ್ರ್ಯಾಕ್ಟರ್ ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ಮದುವೆ ಮುಗಿಸಿಕೊಂಡು ವಾಪಸ್ ನಮ್ಮೂರಿಗೆ ಹೋಗುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದರಿಂದ ಮದುವೆಗೆ ನೀಡಿದ ಅನುಮತಿ ಪತ್ರ ನೀಡುವಂತೆ ತಹಶೀಲ್ದಾರರು ಕೇಳಿದಾಗ ಅನುಮತಿ ಪತ್ರ ಇಲ್ಲದಿರುವುದರಿಂದ ದೂರು ದಾಖಲಿಸಲಾಗಿದೆ. ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.