ಚಾಮರಾಜನಗರ: ಗುಜರಾತ್ ಪ್ರವಾಸಿಗರ ಬಸ್ಸೊಂದು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಮೀಪ ಪಲ್ಟಿಯಾಗಿದೆ. ಈ ಪರಿಣಾಮ 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಗುಜರಾತ್ ಮೂಲದ ಸ್ಲೀಪರ್ ಕೋಚ್ ಬಸ್ ಇದಾಗಿದ್ದು, ತಮಿಳುನಾಡು ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಪಾಲಾರ್ನ ಎರಡನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡ 15 ಪ್ರಯಾಣಿಕರನ್ನು ಮಲೆಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಒಂದು ತಿಂಗಳ ಭಾರತ ಪ್ರವಾಸಕ್ಕಾಗಿ ಅವರು ಗುಜರಾತ್ನಿಂದ ಬಂದಿದ್ದರು ಎಂದು ತಿಳಿದು ಬಂದಿದೆ. ಮಲೆಮಹದೇಶ್ವರಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಟ್ರ್ಯಾಕ್ಟರ್ ಲಾರಿ ನಡುವೆ ಭೀಕರ ಅಪಘಾತ, ಆರು ಜನರಿಗೆ ತೀವ್ರ ಗಾಯ: ಟ್ರ್ಯಾಕ್ಟರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಆರು ಜನರು ತೀವ್ರಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದ ಬಳಿ ಹಿಂದಿನ ತಡರಾತ್ರಿ ಸಂಭವಿಸಿದೆ. ಅಪಘಾತಕ್ಕೆ ತುತ್ತಾಗಿರುವ ಗಾಯಳುಗಳು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಹುಲಿಕುಂಟೆ ಗ್ರಾಮದ ಗ್ರಾಮಸ್ಥರು ಎನ್ನಲಾಗಿದೆ.
ನಿನ್ನೆ ಜಗಳೂರು ತಾಲೂಕು ಗಾಣದಕಟ್ಟೆಯಲ್ಲಿರುವ ದೇವರ ದರ್ಶನಕ್ಕೆ ಎಂದು ತೆರಳಿದ್ದ ಇವರು, ದರ್ಶನ ಮುಗಿಸಿಕೊಂಡು ತಮ್ಮ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇನ್ನು ಗೌರಿಪುರದ ಬಳಿ ಅತಿ ವೇಗವಾಗಿ ಬಂದ ಲಾರಿ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಪ್ಪತು ಜನ ಟ್ರ್ಯಾಕ್ಟರ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಇಪ್ಪತು ಜನರಲ್ಲಿ ಆರು ಜನರಿಗೆ ಗಂಭೀರವಾದ ಪೆಟ್ಟು ಬಿದ್ದಿವೆ. ಗಾಯಾಳುಗಳನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಸರ್ಕಾರಿ ಆಸ್ಪತ್ರೆಗೆ ಗಾಯಳುಗಳನ್ನು ರವಾನಿಸಲಾಗಿದೆ. ಜಗಳೂರು ಪೋಲಿಸ್ ಠಾಣೆಯ ಪೋಲಿಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೌರಿಪುರ ರಸ್ತೆ ಅಪಘಾತದ ಹಾಟ್ ಸ್ಪಾಟ್ : ಜಗಳೂರು ತಾಲೂಕಿನ ಗೌರಿ ಪುರದ ಬಳಿಯ ರಸ್ತೆ ಅಪಘಾತದ ಹಾಟ್ ಸ್ಪಾಟ್ ಆಗಿದ್ದು, ಇಲ್ಲಿ ವೇಗ ಮಿತಿ, ಅಪಘಾತ ವಲಯ ಎಂಬ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸ್ಥಳೀಯರು ಸಾಕಷ್ಟು ಬಾರಿ ಸಂಬಂಧಿಸಿದ್ದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಅಪಘಾತಗಳು ಆಗಿಂದಾಗ್ಗೆ ಜರುಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಅಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳತನ: ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರ ಗ್ರಾಮದ ಅಭಯ ಅಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ರಾತ್ರಿ ದೇವರ ವಿಗ್ರಹದ ಮೇಲಿದ್ದ ಕಿರೀಟ ಸೇರಿದಂತೆ ಹಲವಾರು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ದೇವಾಲಯದ ಬಾಗಿಲು ತೆರೆಯಲು ಅರ್ಚಕರು ಹೋದಾಗ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ.
ದೇವರ ವಿಗ್ರಹದ ಮೇಲಿದ್ದ ಬೆಳ್ಳಿ ಕಿರೀಟ, ಬೆಳ್ಳಿ ಹಸ್ತ, ಹುಂಡಿಯಲ್ಲಿನ ಹಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ. ಈ ದೇವಾಲಯದಲ್ಲಿ ಆರು ತಿಂಗಳ ಹಿಂದೆಯಷ್ಟೇ ಕಳವು ಪ್ರಕರಣ ವರದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂಓದಿ:ಮುಂಬೈ ಫೈರ್ ಬ್ರಿಗೇಡ್ ನೇಮಕಾತಿ: ದೈಹಿಕ ಪರೀಕ್ಷೆಯಲ್ಲಿ 147 ಮಂದಿಗೆ ಗಾಯ