ಸೂರ್ಯಪೇಟ(ತೆಲಂಗಾಣ): ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಣ್ಣಿಗೆ ಖಾರದ ಪುಡಿ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಕ್ರೂರವಾಗಿ ನಡೆದುಕೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟ್‌ನಲ್ಲಿ ನಡೆದಿದೆ. ಕಳೆದ ಶನಿವಾರ ನಡೆದಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಸೇಡಿಗಾಗಿ ಮೃತನ ಕುಟುಂಬಸ್ಥರು ಮಾಡಿರುವ ಈ ಅಮಾನವೀಯ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಜೂನ್ 13 ರಂದು ಸೂರ್ಯಪೇಟ ಮಂಡಲದ ರಾಜುನಾಯಕ್ ತಾಂಡಾದಲ್ಲಿ ಶಂಕರ್ ನಾಯಕ್ ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಅದೇ ತಾಂಡಕ್ಕೆ ಸೇರಿದ ಮಹಿಳೆಯನ್ನು ಕೊಲೆ ಆರೋಪ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಸಂತ್ರಸ್ತೆ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಸೂರ್ಯಪೇಟೆಯಲ್ಲಿರುವ ತನ್ನ ಸಹೋದರಿಯ ಮನೆಗೆ ಬಂದಿದ್ದಳು. ರಾಜುನಾಯಕ್ ತಾಂಡದಲ್ಲಿದ್ದ ಮೃತನ ಸಂಬಂಧಿಯೊಬ್ಬರು ಮಹಿಳೆ ಬಂದಿರುವುದನ್ನು ಗಮನಿಸಿದ್ದ. ಶಂಕರ್ ನಾಯಕ್ ಹತ್ಯೆ ಬಳಿಕ ಮೊದಲ ಬಾರಿಗೆ ತಾಂಡಾಗೆ ಬಂದ ಸಂತ್ರಸ್ತೆಯನ್ನು ಕಂಡ ಕೂಡಲೇ ಮೃತನ ಸಂಬಂಧಿಕರು ಆಕೆಯ ಮೇಲೆ ದಾಳಿ ಮಾಡಿದ್ದಾರೆ. ಮನೆಯಿಂದ ಹೊರಗಡೆ ಎಳೆದು ತಂದು ವಿವಸ್ತ್ರಗೊಳಿಸಿದ್ದಾರೆ. ಕಣ್ಣಿಗೆ ಕಾರದ ಪುಡಿ ಎರಚಿ, ದೊಣ್ಣೆಯಿಂದ ಹೊಡೆದು ಬೀದಿಯಲ್ಲಿ ಮೆರವಣಿಗೆ ಮಾಡಿರುವ ಆರೋಪ ಕೇಳಿಬಂದಿದೆ.
ದುಷ್ಕೃತ್ಯವನ್ನು ತಡೆಯದ ಜನ
ನಡುರಸ್ತೆಯಲ್ಲಿ ಸುಮಾರು 1 ಗಂಟೆ ಕಾಲ ನಡೆದ ಈ ದುಷ್ಕೃತ್ಯವನ್ನು ತಡೆಯಲೂ ಯಾರೂ ಕೂಡ ಮುಂದೆ ಬಂದಿಲ್ಲ. ಕೊನೆಗೆ ಕಿರಾತಕ ಗುಂಪಿನಿಂದ ತಪ್ಪಿಸಿಕೊಂಡ ಮಹಿಳೆ ಎಂಪಿಟಿಸಿ ಸದಸ್ಯೆ ಶಾಂತಾಬಾಯಿ ಎಂಬುವರ ಮನೆಗೆ ಓಡಿ ಹೋಗಿದ್ದಾಳೆ. ಶಾಂತಾಬಾಯಿ ಆಕೆಗೆ ಬಟ್ಟೆ ಕೊಟ್ಟು ಉಳಿದುಕೊಳ್ಳಲು ಆಶ್ರಯ ನೀಡಿದ್ದಾರೆ.
ವಿಷಯ ತಿಳಿದು ತಾಂಡಾಗೆ ಬಂದ ಪೊಲೀಸರು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂತ್ರಸ್ತೆಯನ್ನು ಸೂರ್ಯಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲುನಾವತ್ ಭಾರತಿ, ಬನೋತು ಜ್ಯೋತಿ, ಲುನಾವತ್ ಪದ್ಮಾ, ಜ್ಯೋತಿ, ಸುನೀತಾ, ಪಿಂಪ್ಲಿ, ರಾಜೇಶ್, ಸುಪ್ರಿಯಾ, ಕಿಶನ್ ಮತ್ತು ಇನ್ನೊಬ್ಬ ಯುವತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ತಾಂಡದ ಹಿರಿಯರು ನೋಡುತ್ತಿದ್ದರೂ ಯಾರೂ ಕೂಡ ಕೃತ್ಯವನ್ನು ತಡೆಯಲು ಮುಂದಾಗಿಲ್ಲ ಎಂದು ವಿವರಿಸಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೂರ್ಯಪೇಟ ಗ್ರಾಮೀಣ ಎಸ್ಪಿ ಲವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣದಲ್ಲಿ ಅಮಾಯಕನ ಬಂಧಿಸಿದರೇ ಪೊಲೀಸರು?: DNA ವರದಿಯಿಂದ ವಿದ್ಯಾರ್ಥಿ ಬಚಾವ್!