ಬೆಂಗಳೂರು: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ (ಶ್ರೀಕಿ) ಸಹೋದರ ಸುದರ್ಶನ್ ರಮೇಶ್ ತನ್ನ ಪಾಸ್ಪೋರ್ಟ್ ರದ್ದುಪಡಿಸಿದ್ದನ್ನು ಹಾಗೂ ತನ್ನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ಶ್ರೀಕಿ ಸಹೋದರನಿಗೆ ಭಾರಿ ಹಿನ್ನಡೆಯಾದಂತಾಗಿದೆ.
"ಈ ಪ್ರಕರಣದಲ್ಲಿ ಅರ್ಜಿದಾರನ ಸಹೋದರನ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಹಣ ವರ್ಗಾವಣೆ ಮಾತ್ರವಲ್ಲದೆ ಇದರಲ್ಲಿ ಅರ್ಜಿದಾರ ಹಾಗೂ ಆತನ ಸಹೋದರನ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ." ಎಂದು ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯಾಯಾಲಯದ ಮುಂದೆ ಜಾರಿ ನಿರ್ದೇಶನಾಲಯಯವು ಹಲವಾರು ಇಮೇಲ್ ಸಂದೇಶಗಳ ಪ್ರತಿಗಳನ್ನು ಹಾಜರುಪಡಿಸಿದ್ದು, ಇವುಗಳ ಪ್ರಕಾರ ಅರ್ಜಿದಾರನು ನೆದರ್ಲೆಂಡ್ ದೇಶಕ್ಕೆ ಪರಾರಿಯಾಗಬಹುದು ಹಾಗೂ ಮುಂದೆ ಯಾವುದೇ ವಿಚಾರಣೆಗೆ ಹಾಜರಾಗದಿರಬಹುದು ಎಂಬ ಶಂಕೆಗಳನ್ನು ನಾವಿಲ್ಲಿ ಮಾನ್ಯ ಮಾಡಬೇಕಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದರು.
"ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕರಿಸುವುದು ಹಾಗೂ ತನ್ನ ಸಹೋದರನ ವಿರುದ್ಧದ ಅಕ್ರಮ ಹಣ ವರ್ಗಾವಣೆಯಲ್ಲಿ ತನ್ನ ಪಾತ್ರವಿಲ್ಲ ಎಂಬುದನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿಸುವುದು ಮತ್ತು ಲುಕೌಟ್ ನೋಟಿಸ್ ಹಿಂಪಡೆಯುವಂತೆ ಮನವಿ ಮಾಡುವುದು ಅರ್ಜಿದಾರನ ಕರ್ತವ್ಯ." ಎಂದು ನ್ಯಾಯಾಧೀಶ ಎಸ್.ಜಿ. ಪಂಡಿತ್ ವಿಚಾರಣೆ ವೇಳೆ ಹೇಳಿದರು.
ಅರ್ಜಿದಾರನು ತನ್ನ ಸಹೋದರ ಶ್ರೀಕಿಯಿಂದ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಪಡೆದ 50 ಸಾವಿರ ಗ್ರೇಟ್ ಬ್ರಿಟನ್ ಪೌಂಡ್ ಮೊತ್ತದ ಬಗ್ಗೆ ಬಾಯಿ ಬಿಡುತ್ತಿಲ್ಲ. ಇದರ ಬಗ್ಗೆ ಸೂಕ್ತ ಉತ್ತರ ನೀಡುವವರೆಗೆ ಹಾಗೂ ಹಣ ಹನೀಷ್ ಪಟೇಲ್ ಎಂಬಾತನಿಗೆ ವರ್ಗಾವಣೆಯಾದ ಬಗ್ಗೆ ಮತ್ತು ತಾತ್ಕಾಲಿಕ ಇಮೇಲ್ಗಳ ಪಾಸ್ ವರ್ಡ್ ಮತ್ತು ನಿರ್ದಿಷ್ಟ ಕೀಗಳ ಬಗ್ಗೆ ಅರ್ಜಿದಾರ ಸರಿಯಾದ ಮಾಹಿತಿ ನೀಡುವವರೆಗೆ ತನಿಖೆಗೆ ಆತ ಅಗತ್ಯವಾಗಿದ್ದಾನೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತು.
ಅಲ್ಲದೆ ಕೆಲ ಮೊತ್ತದ ಗ್ರೇಟ್ ಬ್ರಿಟನ್ ಪೌಂಡ್ಗಳು ಸ್ವಿಸ್ ಖಾತೆಗೆ ವರ್ಗಾವಣೆಯಾಗಿರುವುದು ಅರ್ಜಿದಾರ ಮತ್ತು ಆತನ ತಂದೆಯ ಮಧ್ಯೆ ನಡೆದ ಮಾತುಕತೆಯಿಂದ ತಿಳಿಯುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎಂದು ಇಡಿ ಕೋರ್ಟ್ಗೆ ತಿಳಿಸಿತು.