ಬೆಳಗಾವಿ: ಹಣದ ವಿಚಾರಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿ ಸೇರಿ ಆತನಿಗೆ ಸಹಾಯ ಮಾಡಿದ್ದವನಿಗೆ, ಬೆಳಗಾವಿ 10ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:
ನಗರದ ಮೊಹಮ್ಮದ್ ರಸೂಲ್ ಶೇಖ್ ಕೊಲೆಯಾದ ಆಟೋ ಚಾಲಕ. ಮೃತ ವ್ಯಕ್ತಿ 2015ರಲ್ಲಿ ಜಾಂಬೋಟಿಗೆ ಹೋಗಲು ಜಮೀರ್ ಎಂಬಾತನಿಗೆ ತನ್ನ ಆಟೋವನ್ನು ಬಾಡಿಗೆ ಕೊಡುತ್ತಾನೆ. ಬಾಡಿಗೆ ತೆಗೆದುಕೊಂಡು ಹೋದ ಜಮೀರ್ ಮರಳಿ ವಾಪಸ್ ಬರುವ ಸಂದರ್ಭದಲ್ಲಿ ಅಪಘಾತವಾಗಿ ಆಟೋಕ್ಕೆ ಹಾನಿ ಆಗುತ್ತದೆ. ಹೀಗಾಗಿ ಬಾಡಿಗೆ ಕೊಟ್ಟಿದ್ದ ಮೊಹಮ್ಮದರ ಸೂಲ್ ರಿಪೇರಿ ಮಾಡಿರುವ ಖರ್ಚು ವೆಚ್ಚದ ಹಣವನ್ನು ಕೊಡುವಂತೆ ಕೇಳಿದ್ದಾನೆ.
ಓದಿ: ಯುವತಿ ವಿಚಾರದಲ್ಲಿ ಗಲಾಟೆ ; ಹಲ್ಲೆಗೊಳಗಾಗಿ ಯುವಕ ಸಾವು : ಹಾಸನದಲ್ಲಿ ಪ್ರಕರಣ ದಾಖಲು..
ಅಷ್ಟಕ್ಕೆ ರೊಚ್ಚಿಗೆದ್ದ ಜಮೀರ್ ತನ್ನ ಗೆಳೆಯ ಮಹ್ಮದ್ ಅನ್ವರ್ ಎಂಬಾತನ ಜೊತೆಗೂಡಿ (2015/09/24) ರಂದು ಆಜಾದ್ನಗರದ ಮೇನ್ ರಸ್ತೆಯಲ್ಲಿ ಚಾಕುವಿನಿಂದ ಕುತ್ತಿಗೆ, ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡುತ್ತಾನೆ. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಮೃತನ ಹೆಂಡತಿ ಪ್ರಕರಣ ದಾಖಲಿಸುತ್ತಾರೆ. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸುತ್ತಾರೆ.
ತನಿಖೆಯಲ್ಲಿ ಜಮೀರ್ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಬಗ್ಗೆ ಆರೋಪ ಸಾಬೀತು ಆಗುತ್ತದೆ. ಆರೋಪ ಸಾಬೀತು ಆಗಿರುವ ಹಿನ್ನೆಲೆ 10ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ ರಾಮಕೃಷ್ಣ ರಾವ್ ಅವರು ಇಬ್ಬರು ಆರೋಪಿಗಳಿಗೂ 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.