ಸುಳ್ಯ(ದಕ್ಷಿಣ ಕನ್ನಡ): ಸುಳ್ಯದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರ ಮೇಲೆ 2014ರ ಲೋಕಸಭಾ ಚುನಾವಣಾ ವೇಳೆ ಹಲ್ಲೆ, ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿ 15 ಮಂದಿಗೆ ಸುಳ್ಯ ನ್ಯಾಯಾಲಯವು ಜೈಲು ಶಿಕ್ಷೆಯ ಆದೇಶ ಹೊರಡಿಸಿದೆ.
15 ಜನರ ಗುಂಪಿನಿಂದ ಹಲ್ಲೆ..
2014ರ ಲೋಕಸಭಾ ಚುನಾವಣೆಯ ವೇಳೆ ಸಂತ್ರಸ್ತೆ ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆಯಲ್ಲಿ ಅಂದಿನ ಜಿ.ಪಂ ಸದಸ್ಯೆ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಹರೀಶ್ ಕಂಜಿಪಿಲಿ ಮತ್ತು ಇತರ 15 ಜನರ ಗುಂಪು ಆಕೆಯ ಮೇಲೆ ಹಲ್ಲೆ ಹಾಗೂ ಖಾಸಗಿ ಭಾಗಗಳಿಗೆ ತುಳಿದು ಮಾನಭಂಗ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಂತ್ರಸ್ತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದ ಅಂದಿನ ಸುಳ್ಯ ಠಾಣಾಧಿಕಾರಿ ರವಿ ಬಿ.ಎಸ್. ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
2ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ಪರಿಹಾರಕ್ಕೆ ಆದೇಶ
ಭಾರತೀಯ ದಂಡ ಸಂಹಿತೆ, ಸೆಕ್ಷನ್ 149,147/149, 341,506, 504, 323, 354 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ಸಾಬೀತಾಗಿದ್ದು, ಇದೆಲ್ಲವನ್ನೂ ಸಂಕ್ಷಿಪ್ತಗೊಳಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮಶೇಖರ್ ಎ.ಅವರು ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಮಾತ್ರವಲ್ಲದೆ ಎಲ್ಲಾ 15 ಮಂದಿ ಅಪರಾಧಿಗಳಿಗೆ ತಲಾ ರೂ. 3,750 ರಂತೆ 50 ಸಾವಿರ ರೂ. ಪರಿಹಾರವನ್ನು ನೊಂದ ಮಹಿಳೆಗೆ ನೀಡುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸಂತ್ರಸ್ತೆ ನಮಗೆ ನ್ಯಾಯಯುತವಾಗಿ ಐತಿಹಾಸಿಕ ಗೆಲುವು ಸಿಗುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಿಸಿದೆ ಎಂದಿದ್ದಾರೆ.