ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣದಡಿ ಬಂಧಿತರಾಗಿರುವ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ವಿಚಾರಣೆಗೊಳಪಡಿಸಲು ಈಗ ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ ಎಂಬ ಮಾಹಿತಿ ದೊರೆತಿದೆ.
ಈ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಪತ್ರ ಬರೆದಿದ್ದ ಸಚಿನ್ ವಾಜೆ, ಮಹಾರಾಷ್ಟ್ರದ ಹಿರಿಯ ಸಚಿವರೊಬ್ಬರ ಆಪ್ತ ಸಹಾಯಕನೆಂದು ದರ್ಶನ್ ಘೋಡಾವತ್ ಎಂಬ ವ್ಯಕ್ತಿ ಪರಿಚಯಿಸಿಕೊಂಡಿದ್ದು, ಅಕ್ರಮ ಗುಟ್ಕಾ ಮಾರಾಟಗಾರರಿಂದ ಪ್ರತಿ ತಿಂಗಳು ಕಾನೂನುಬಾಹಿರವಾಗಿ 100 ಕೋಟಿ ರೂ. ವಸೂಲಿ ಮಾಡುವಂತೆ ಸೂಚಿಸಿದ್ದರು. ಇದಕ್ಕೆ ನಾನು ನಿರಾಕರಿಸಿದಾಗ ಘೋಡಾವತ್ ನನ್ನ ಕಚೇರಿಗೆ ಬಂದು, ನಿಮ್ಮ ಈ ನಡೆಗೆ ಸಚಿವರು ಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು.
ಹೀಗಾಗಿ ಈ ಸಂಬಂಧ ವಾಜೆಯನ್ನು ಇಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಎಸ್ಐಟಿ ಮುಂದೆ ಸಿಡಿ ಲೇಡಿ ತದ್ವಿರುದ್ಧ ಹೇಳಿಕೆ ನೀಡಿಲ್ಲ: ಯುವತಿ ಪರ ವಕೀಲರ ಸ್ಪಷ್ಟನೆ
ಮುಖೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ ಮತ್ತು ಮನ್ಸುಖ್ ಹಿರೇನ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡು ಎನ್‌ಐಎ ವಶದಲ್ಲಿದ್ದ ಸಚಿನ್ ವಾಜೆಯನ್ನು ಏ. 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎನ್‌ಐಎ ವಿಶೇಷ ಕೋರ್ಟ್ ಏ.9ರಂದು ಆದೇಶ ನೀಡಿತ್ತು.