ಕಠ್ಮಂಡು : ಭೋಜ್‌ಪುರಿ ಟ್ರೆಂಡಿಂಗ್ ಸ್ಟಾರ್ ಕೇಸರಿ ಲಾಲ್ ಯಾದವ್ ಅವರು ಭಾಗವಹಿಸಬೇಕಿದ್ದ ಸಂಗೀತ ಕಾರ್ಯಕ್ರಮ ಏಕಾಏಕಿ ರದ್ದಾಗಿದ್ದಕ್ಕೆ ರೊಚ್ಚಿಗೆದ್ದ ಗುಂಪೊಂದು ವೇದಿಕೆಯನ್ನು ಧ್ವಂಸಗೊಳಿಸಿ ಕುರ್ಚಿಗಳನ್ನು ಪುಡಿ ಮಾಡಿ ಕಾರಿಗೆ ಬೆಂಕಿ ಇಟ್ಟಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ಸುನ್ಸಾರಿ ಜಿಲ್ಲೆಯ ಬುರ್ಜ್ ತಾಲ್‌ನಲ್ಲಿ ಬೆಳಗ್ಗೆಯಿಂದಲೇ ಜನರು ಕೇಸರಿ ಲಾಲ್‌ಗಾಗಿ ಕಾದು ಕುಳಿತಿದ್ದರು. ಆದರೆ, ಅವರು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಗೊತ್ತಾದ ತಕ್ಷಣ ಆಕ್ರೋಶಗೊಂಡ ಗುಂಪು ವೇದಿಕೆಯನ್ನು ಧ್ವಂಸ ಮಾಡಿದೆ.
ಭೋಜ್‌ಪುರಿ ಗಾಯಕ ಕೇಸರಿ ಲಾಲ್ ಯಾದವ್ ಅವರ ಕಾರ್ಯಕ್ರಮವನ್ನು ಬುರ್ಜ್ ಮಹೋತ್ಸವದ ಕೊನೆಯ ದಿನವಾದ ನಿನ್ನೆ ನೇಪಾಳದ ಸುನ್ಸಾರಿ ಜಿಲ್ಲೆಯ ಬುರ್ಜ್ ತಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆಯೋಜಕರು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದರು. ದುಡ್ಡು ಕೊಟ್ಟು ಟಿಕೆಟ್ ಪಡೆದು ಸ್ಥಳಕ್ಕೆ ಬಂದಿದ್ದ ಜನರು ಬೆಳಗ್ಗೆಯಿಂದ ಕಾದು ಕುಳಿತ್ತಿದ್ದರು.
ಆದರೆ, ಸ್ಥಳೀಯ ಪೊಲೀಸರು ಕಾರ್ಯಕ್ರಮವನ್ನು ನಿಷೇಧಿಸಿದ್ದಾರೆ. ಹೀಗಾಗಿ, ಕೇಸರಿ ಲಾಲ್ ಅಲ್ಲಿಗೆ ಬರುವುದಿಲ್ಲ ಎಂದು ಗೊತ್ತಾಗಿದೆ. ಇದರಿಂದ ರೊಚ್ಚಿಗೆದ್ದ ಜನರು ಹಿಂಸಾಚಾರಕ್ಕೆ ಇಳಿದಿದ್ದಾರೆ. ಘಟನೆ ಬಳಿಕ ಫೇಸ್‌ಬುಕ್ ಲೈವ್‌ಗೆ ಬಂದ ಬೋಜ್‌ಪುರಿ ಟ್ರೆಂಡಿಂಗ್ ಸ್ಟಾರ್ ಕೇಸರಿ ಲಾಲ್, ಕೋವಿಡ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಅನುಮತಿ ನೀಡದಿರುವ ಬಗ್ಗೆ ಆಯೋಜಕರಿಗೆ ತಿಳಿಸಬೇಕಿತ್ತು ಎಂದು ಹೇಳಿದ್ದಾರೆ.
ನಾನು ಬಂದಿಲ್ಲ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ಆದರೆ, ಕಾರ್ಯಕ್ರಮವನ್ನೇ ರದ್ದು ಮಾಡಿದ್ದಾರೆ. ನಾನು ನೇಪಾಳದಲ್ಲಿದ್ದೇನೆ. ಇದರಿಂದ ಒಂದೂವರೆ ಕೋಟಿಗೂ ಹೆಚ್ಚು ನಷ್ಟವಾಗಿದೆ. ಇದಕ್ಕೆ ಸಾರ್ವಜನಿಕರಾಗಲಿ, ಆಡಳಿತವಾಗಲಿ ತಪ್ಪಿತಸ್ಥರಲ್ಲ ಎಂದು ಕೇಸರಿ ಹೇಳಿದರು.