ಕಾರವಾರ(ಉತ್ತರ ಕನ್ನಡ): ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದ ಯುವತಿ ವಸುಧಾ ಹೆಗಡೆ ತಮ್ಮದೇ ಊರಿನ ಯುವಕ ನೀಲಕಂಠ ನಾಯ್ಕ ಎಂಬುವರನ್ನು ಪ್ರೀತಿಸಿದ್ದಳು. ಈತನಿಗೂ ವಸುಧಾ ಮೇಲೆ ಪ್ರೇಮಾಂಕುರವಾಗಿತ್ತು. ಆದರೆ ಇಬ್ಬರ ಪ್ರೀತಿ ವಿಚಾರ ಯುವತಿ ಮನೆಯವರಿಗೆ ಗೊತ್ತಾಗಿದೆ. ಯುವಕ ಅನ್ಯಜಾತಿಯವನು ಎನ್ನುವ ಒಂದೇ ಒಂದು ಕಾರಣಕ್ಕೆ ಯುವತಿ ಮನೆಯವರು ಇಬ್ಬರನ್ನು ಬೇರ್ಪಡಿಸಲು ಮುಂದಾಗಿದ್ದರು. ಆದರೆ ಗಾಢವಾದ ಪ್ರೀತಿಯಲ್ಲಿ ಬಿದ್ದಿದ್ದ ಯುವ ಪ್ರೇಮಿಗಳು ಮನೆಯಿಂದ ಓಡಿಹೋಗಿ ಮದುವೆಯಾಗಿದ್ದಾರೆ. ಇದೀಗ ಯುವತಿ ಸಂಬಂಧಿಕರು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ತಮ್ಮ ಮದುವೆಯನ್ನು ಅಂಕೋಲಾ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಸಹ ಮಾಡಿಸಿ ಮದುವೆಯಾದ ಖುಷಿಯನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು ಈ ಜೋಡಿ. ಆದ್ರೆ ಯುವ ಇವರು ಮದುವೆಯಾದಾಗಿನಿಂದ ಯುವತಿ ಮನೆಯವರು ಆಕ್ರೋಶಗೊಂಡಿದ್ದಾರೆ. ಊರಿಗೆ ಬಂದ್ರೆ ಹಲ್ಲೆ ನಡೆಸೋದಾಗಿ ಕಮೆಂಟ್‌ಗಳನ್ನ ಹಾಕಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ವಸುಧಾ ಹೆಗಡೆ ಆರೋಪಿಸಿದ್ದಾರೆ.
ಯುವಕನ ವಿರುದ್ಧ ಕಿಡ್ನ್ಯಾಪ್ ಕೇಸ್
ನವವಿವಾಹಿತರು ಮನೆಯವರಿಗೆ ಹೆದರಿ ಕಳೆದೊಂದು ವಾರದಿಂದ ಅಂಕೋಲಾದಲ್ಲಿ ಉಳಿದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಯುವತಿ ಮನೆಯವರು ಶಿರಸಿ ಠಾಣೆಯಲ್ಲಿ ಯುವಕನ ವಿರುದ್ಧ ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದು, ಇದರಿಂದ ಯುವಜೋಡಿ ಕಂಗಾಲಾಗಿದ್ದಾರೆ. ಅಲ್ಲದೇ ಫೇಸ್‌ಬುಕ್‌ನಲ್ಲಿ ಸಹ ಯುವತಿ ಸಂಬಂಧಿಕರಿಂದ ಸಾಕಷ್ಟು ಬೆದರಿಕೆ ಕಮೆಂಟ್‌ಗಳು ಬರುತ್ತಿವೆ ಎಂದು ಆರೋಪಿಸಲಾಗಿದೆ. ಇದರಿಂದ ಆತಂಕ ಎದುರಾಗಿದೆ ಎಂದು ಯುವ ಜೋಡಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: 3ನೇ ಅಲೆ ಆತಂಕ, ಗಡಿಯಲ್ಲಿ ಬಿಗಿ ಕ್ರಮ: ನಿಶ್ಚಿತಾರ್ಥಕ್ಕೆ ಗೋವಾದಿಂದ ಬಂದು ವರನ ಕುಟುಂಬಸ್ಥರ ಪರದಾಟ
ಪೊಲೀಸ್ ಠಾಣೆಯಿಂದ ಕರೆಮಾಡಿಸಿ ಯುವಕನನ್ನ ಬೆದರಿಸುತ್ತಿರುವ ಆರೋಪ ಕೇಳಿಬಂದಿದೆ. ತಮ್ಮ ಜೀವಕ್ಕೆ ಅಪಾಯವಿದ್ದು, ರಕ್ಷಣೆ ನೀಡುವಂತೆ ಯುವಜೋಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿಯನ್ನು ಸಹ ಮಾಡಿದ್ದಾರೆ.