ರೋಹ್ಟಕ್(ಚಂಡೀಗಢ): ದೇಶದಲ್ಲಿ ಕಾಮುಕರ ಪೈಶಾಚಿಕ ಕೃತ್ಯಗಳು ಮುಂದುವರಿದಿದೆ. 5ನೇ ತರಗತಿಯ ವಿದ್ಯಾರ್ಥಿ ಮೇಲೆ 18 ವರ್ಷಯ ಯುವಕ ಹಾಗೂ 8 ಮಂದಿ ಅಪ್ರಾಪ್ತರು ಸಾಮೂಹಿಕ ಅತ್ಯಾಚಾರ ಮಾಡಿ ಅದರ ವಿಡಿಯೋ ಮಾಡಿರುವ ಅಮಾನವೀಯ ಕೃತ್ಯ ರೆವಾರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಘಟನೆ ಸಂಬಂಧ 9 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಐವರು ಬಂಧಿತರು 10 ರಿಂದ 12 ವರ್ಷದೊಳಗಿನವರಿದ್ದಾರೆ. ಮೇ 24 ರಂದು 10 ವರ್ಷದ ಬಾಲಕಿ ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಸಮೀಪದ ಸರ್ಕಾರಿ ಶಾಲೆಗೆ ಬಾಲಕಿಯನ್ನು ಕರೆದೊಯ್ದು ಕೃತ್ಯವೆಸಗಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ ಎಂದು ರೆವಾರಿ ಡಿಎಸ್‌ಪಿ ಹನ್ಸ್‌ರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ರೈಲಿಗೆ ತಲೆಕೊಟ್ಟು ಐವರು ಹೆಣ್ಣುಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ
ಅತ್ಯಾಚಾರದ ವಿಡಿಯೋ ಮಾಡಿದ ಬಳಿಕ ಕೃತ್ಯದ ಬಗ್ಗೆ ಯಾರಿಗಾದ್ರೂ ಹೇಳಿದರೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ವಿಡಿಯೋವನ್ನು ಎಲ್ಲೆಡೆ ಷೇರ್ ಮಾಡಿರುವ ಪಾಪಿಗಳು, ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ 18 ವರ್ಷದ ಬಂಧಿತ ಆರೋಪಿಯನ್ನು ರೆವಾರಿಯ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಈತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಉಳಿದ ಅಪ್ರಾಪ್ತ ಆರೋಪಿಗಳನ್ನು ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.